ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯವು (ಇ.ಡಿ) ತನಿಖೆ ನಡೆಸುತ್ತಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
‘ಜೇಮ್ಸ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು ಹೇಳಿದರು.
‘ಸಿಬಿಐ ಮತ್ತು ಇ.ಡಿ ನಡೆಸುತ್ತಿರುವ ತನಿಖೆಯಲ್ಲಿ ನನ್ನ ಅಗತ್ಯವಿಲ್ಲ. ಹಾಗಾಗಿ, ನನಗೆ ಜಾಮೀನು ನೀಡಬೇಕು’ ಎಂದು ಕೋರಿ ಜೇಮ್ಸ್ ಅರ್ಜಿ ಸಲ್ಲಿಸಿದ್ದರು.
‘ಆರೋಪಿಯು ಎಂದಿಗೂ ಕಾನೂನಿನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿಲ್ಲ ಮತ್ತು ಅವರನ್ನು ಕಸ್ಟಡಿಯಲ್ಲಿ ಇರಿಸುವುದರಿಂದ ಯಾವುದೇ ಉದ್ದೇಶವನ್ನು ಪೂರೈಸಲಾಗುವುದಿಲ್ಲ’ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.
ಆದರೆ, ಸಿಬಿಐ ಮತ್ತು ಇ.ಡಿ ಜಾಮೀನು ನೀಡುವುದನ್ನು ವಿರೋಧಿಸಿದ್ದವು.
‘ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ₹ 3,600 ಕೋಟಿ ಮೊತ್ತದ 12 ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಹಗರಣ ನಡೆದಿದ್ದು, ಇದರಲ್ಲಿ ಮಧ್ಯವರ್ತಿಯಾಗಿದ್ದ ಜೇಮ್ಸ್ ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಸುಮಾರು ₹ 225 ಕೋಟಿ ಪಡೆದಿದ್ದಾರೆ’ ಎನ್ನುವ ಆರೋಪವಿದೆ.
2018ರ ಡಿಸೆಂಬರ್‌ನಲ್ಲಿ ಜೇಮ್ಸ್ ಅವರನ್ನು ದುಬೈನಿಂದ ಹಸ್ತಾಂತರಿಸಲಾಗಿತ್ತು. ಬಳಿಕ ಎರಡೂ ತನಿಖಾ ಸಂಸ್ಥೆಗಳಿಂದ ಬಂಧಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.