ADVERTISEMENT

ರಾಹುಲ್ ಪೌರತ್ವ ವಿವಾದ: ದಾಖಲೆ ಸಲ್ಲಿಸಲು ಸುಬ್ರಮಣಿಯನ್ ಸ್ವಾಮಿಗೆ ಸಮಯ ನೀಡಿದ HC

ಪಿಟಿಐ
Published 9 ಅಕ್ಟೋಬರ್ 2024, 9:25 IST
Last Updated 9 ಅಕ್ಟೋಬರ್ 2024, 9:25 IST
<div class="paragraphs"><p>ಸುಬ್ರಮಣಿಯನ್ ಸ್ವಾಮಿ, ರಾಹುಲ್ ಗಾಂಧಿ</p></div>

ಸುಬ್ರಮಣಿಯನ್ ಸ್ವಾಮಿ, ರಾಹುಲ್ ಗಾಂಧಿ

   

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪೌರತ್ವ ಪ್ರಶ್ನಿಸಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ಅರ್ಜಿಯ ಪ್ರತಿಯನ್ನು ಸಲ್ಲಿಸಲು ದೆಹಲಿ ಹೈಕೋರ್ಟ್ ಕಾಲಾವಕಾಶ ನೀಡಿದೆ.

ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಹಾಗೂ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣ ಎರಡೂ ಬೇರೆಯೇ ಆಗಿದೆ. ಹೀಗಾಗಿ ಅಲ್ಲಿ ಸಲ್ಲಿಸಿರುವ ಅರ್ಜಿ ಹಾಗೂ ಕೋರಿಕೆಯ ಪ್ರತಿಯನ್ನು ಸಲ್ಲಿಸಲಾಗುವುದು ಎಂದು ಸ್ವಾಮಿ ನ್ಯಾಯಾಲಯದ ಗಮನಕ್ಕೆ ತಂದರು.

ADVERTISEMENT

ನ್ಯಾ. ಮನಮೋಹನ್ ಹಾಗೂ ನ್ಯಾ. ತುಷಾರ್ ರಾವ್ ಗೆಡೇಲಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯ ಪ್ರತಿಯನ್ನು ಎಲೆಕ್ಟ್ರಾನಿಕ್ ದಾಖಲೆ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪೀಠ ನಿರ್ದೇಶಿಸಿತು. ಮುಂದಿನ ವಿಚಾರಣೆಯನ್ನು ನ. 6ಕ್ಕೆ ಪೀಠ ಮುಂದೂಡಿತು.

ರಾಹುಲ್ ಗಾಂಧಿ ಅವರಿಗೆ ಭಾರತೀಯ ಪೌರತ್ವ ನೀಡಿರುವುದನ್ನು ರದ್ದುಪಡಿಸುವ ಕುರಿತು ಹಾಗೂ ತಾನು ನೀಡಿರುವ ಅರ್ಜಿಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ವರದಿ ಸಲ್ಲಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಅವರು ನ್ಯಾಯಪೀಠವನ್ನು ಕೋರಿ ಅರ್ಜಿ ಸಲ್ಲಿಸಿದ್ದರು.

‘ಆದರೆ, ಇದೇ ಕೋರಿಕೆ ಇರುವ ಅರ್ಜಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಎರಡು ನ್ಯಾಯಾಲಯಗಳು ಒಂದೇ ವಿಷಯವಾಗಿ ವಿಚಾರಣೆ ನಡೆಸಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿತು.

ಇದಕ್ಕೆ ಉತ್ತರಿಸಿದ ಸುಬ್ರಮಣಿಯನ್ ಸ್ವಾಮಿ, ‘ಎರಡೂ ಪ್ರಕರಣಗಳು ಬೇರೆಯೇ ಆಗಿವೆ. ಅಲ್ಲಿರುವ ಪ್ರಕರಣದಲ್ಲಿ ತಾನು ಸಲ್ಲಿಸಿರುವ ಅರ್ಜಿ ಹಾಗೂ ಪ್ರಾರ್ಥನೆಯ ಪ್ರತಿಯನ್ನು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ರಾಹುಲ್ ಗಾಂಧಿ ಅವರೇ ತಾನು ಬ್ರಿಟನ್‌ನ ಪ್ರಜೆ ಹಾಗೂ ಬ್ರಿಟಿಷ್ ಪಾಸ್‌ಪೋರ್ಟ್‌ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದು ಸಂವಿಧಾನದ 9ನೇ ವಿಧಿಗೆ ವಿರುದ್ಧವಾದದ್ದು. ಹೀಗಾಗಿ ಅವರ ಭಾರತೀಯ ಪೌರತ್ವವನ್ನು ರದ್ದುಪಡಿಸಬೇಕು ಎಂದು ಗೃಹ ಸಚಿವಾಲಯಕ್ಕೆ 2019ರ ಆ. 6ರಂದು ಸ್ವಾಮಿ ಪತ್ರ ಬರೆದಿದ್ದರು. 

ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಈ ಪ್ರಕರಣದಲ್ಲಿ ಅರ್ಜಿದಾರ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯಕ್ಕೆ ಕೇಳಿತ್ತು. ಜತೆಗೆ, ಪ್ರಕರಣ ಕುರಿತು ತನಿಖೆ ನಡೆಸುವಂತೆಯೂ ನಿರ್ದೇಶಿಸಿತ್ತು.

ರಾಹುಲ್ ಗಾಂಧಿ ಅವರು ಬ್ರಿಟನ್ ಪ್ರಜೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ. ಈ ಕುರಿತಂತೆ ತಾನು ಆಳವಾದ ತನಿಖೆ ನಡೆಸಿರುವುದಾಗಿ ಕರ್ನಾಟಕ ಮೂಲಕ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.