ADVERTISEMENT

ಮದುವೆ: ಹೆಣ್ಣು–ಗಂಡಿಗೆ ಒಂದೇ ವಯಸ್ಸು?

ಪಿಐಎಲ್‌ ಅರ್ಜಿ ವಿಚಾರಣೆ– ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ

ಪಿಟಿಐ
Published 19 ಆಗಸ್ಟ್ 2019, 20:19 IST
Last Updated 19 ಆಗಸ್ಟ್ 2019, 20:19 IST
   

ನವದೆಹಲಿ: ಕಾನೂನುಬದ್ಧವಾಗಿ ವಿವಾಹವಾಗಲು ಹೆಣ್ಣು ಮತ್ತು ಗಂಡಿಗೆ ಒಂದೇ ವಯಸ್ಸು ಇರಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆಯನ್ನು ಸೋಮವಾರಕೈಗೆತ್ತಿಕೊಂಡಿರುವ ದೆಹಲಿ ಹೈಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿದೆ.

ಭಾರತದಲ್ಲಿ ಗಂಡಿಗೆ ವಿವಾಹ ವಯಸ್ಸು 21 ವರ್ಷ, ಹೆಣ್ಣಿಗೆ 18 ವರ್ಷ ಎಂದು ನಿಗದಿಪಡಿಸಲಾಗಿದೆ. ಹೆಣ್ಣಿನ ವಿಚಾರದಲ್ಲಿ ಇದು ‘ಸ್ಪಷ್ಟವಾಗಿ ತೋರುವ ತಾರತಮ್ಯ’ವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದ್ದು, ಈ ಬಗ್ಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನೊಳಗೊಂಡ ಪೀಠ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ ನಾಯಕ ಮತ್ತು ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಗಂಡಿಗೆ ಹೆಚ್ಚು ಮತ್ತು ಹೆಣ್ಣಿಗೆ ಕಡಿಮೆ ವಯಸ್ಸು ನಿಗದಿಪಡಿಸಿರುವುದು ಪಿತೃಪ್ರಧಾನ ವ್ಯವಸ್ಥೆಯ ಮುಂದುವರಿಕೆಯಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

ಪ್ರಕರಣದ ವಿಚಾರಣೆ ಯನ್ನುಹೈಕೋರ್ಟ್ ಅಕ್ಟೋಬರ್ 30ಕ್ಕೆ ಕಾಯ್ದಿರಿಸಿದೆ.

ಅರ್ಜಿದಾರರ ವಾದವೇನು?: ವಿವಾಹದ ವಯಸ್ಸಿನ ತಾರತಮ್ಯವು ಲಿಂಗ ಸಮಾನತೆ, ನ್ಯಾಯ ಮತ್ತು ಮಹಿಳೆಯ ಘನತೆಯ ಆಶಯಕ್ಕೆ ವಿರೋಧಿಯಾಗಿದೆ.ಈ ನಿಟ್ಟಿನಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ತಾರತಮ್ಯವನ್ನು ಕುರಿತು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

‘ವಿವಾಹಿತ ಮಹಿಳೆಯರು ಗಂಡನ ಅಧೀನದಲ್ಲಿರಬೇಕೆಂಬ ನಿರೀಕ್ಷೆ ‘ಸಾಮಾಜಿಕ ವಾಸ್ತವ’. ಈ ರೀತಿಯ ಶಕ್ತಿ ಅಥವಾ ಅಧಿಕಾರದ ಅಸಮತೋಲನ ವಯಸ್ಸಿನ ತಾರತಮ್ಯದಿಂದ ಬಂದಿದೆ. ಕಿರಿಯ ವಯಸ್ಸಿನ ಹೆಂಡತಿ, ಹಿರಿಯ ವಯಸ್ಸಿನ ಗಂಡನನ್ನು ಗೌರವಿಸುವ ಮತ್ತು ಆತನನ್ನು ನೋಡಿಕೊಳ್ಳುತ್ತಾರೆಂಬ ನಿರೀಕ್ಷೆ ಬಹು ಹಿಂದಿನಿಂದಲೂ ಭಾರತದಲ್ಲಿದೆ. ಇದು ವೈವಾಹಿಕ ಸಂಬಂಧದಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಲಿಂಗ ತಾರತಮ್ಯವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಹಾಗಾಗಿ, ವಿವಾಹದ ವಿಚಾರದಲ್ಲಿ ಹೆಣ್ಣು ಮತ್ತು ಗಂಡಿಗೆ ಏಕಪ್ರಕಾರವಾದ ವಯಸ್ಸನ್ನು ನಿಗದಿಪಡಿಸಬೇಕೆಂಬುದು ಅರ್ಜಿಯ ಸಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.