ADVERTISEMENT

ಕೇಜ್ರಿವಾಲ್‌ ವಿಚಾರಣೆಯ ವಿಡಿಯೊ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ತಾಕೀತು

ಪಿಟಿಐ
Published 15 ಜೂನ್ 2024, 6:41 IST
Last Updated 15 ಜೂನ್ 2024, 6:41 IST
   

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿಚಾರಣೆ ಸಂದರ್ಭದ ವಿಡಿಯೊ ಒಂದನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಎಕ್ಸ್‌ ಮತ್ತು ಯೂಟ್ಯೂಬ್‌ಗೆ ದೆಹಲಿ ಹೈಕೋರ್ಟ್‌ ಶನಿವಾರ ಆದೇಶಿಸಿದೆ.

ಕೇಜ್ರಿವಾಲ್ ಅವರು ವಿಚಾರಣಾ ನ್ಯಾಯಾಲಯದಲ್ಲಿ ಮೌಖಿಕವಾಗಿ ವಾದ ಮಂಡಿಸಿದ್ದ ವಿಡಿಯೊ ಒಂದನ್ನು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ ಎನ್ನಲಾಗಿದೆ.

ವೈಭವ್ ಸಿಂಗ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನೀನಾ ಬನ್ಸಲ್ ಕೃಷ್ಣ ಮತ್ತು ಅಮಿತ್ ಶರ್ಮ ಅವರು ಇದ್ದ ವಿಭಾಗೀಯ ಪೀಠವು, ಕೋರ್ಟ್ ಕಲಾಪವನ್ನು ಚಿತ್ರೀಕರಿಸಿಕೊಂಡಿದ್ದು ನಿಯಮಗಳ ಉಲ್ಲಂಘನೆ, ಆ ವಿಡಿಯೊವನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವಂತೆ ಉಳಿಸಿಕೊಳ್ಳಲಾಗದು ಎಂದು ಹೇಳಿತು.

ADVERTISEMENT

ಕೇಜ್ರಿವಾಲ್ ಅವರನ್ನು ಬಂಧಿಸಿ ಮಾರ್ಚ್ 28ರಂದು ಕೋರ್ಟ್‌ಗೆ ಹಾಜರುಪಡಿಸಲಾಯಿತು. ಅವರು ನ್ಯಾಯಾಧೀಶರನ್ನು ಉದ್ದೇಶಿಸಿ ತಾವೇ ಮಾತನಾಡಿದರು. ಇದನ್ನು ವಿಡಿಯೊ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಸಿಂಗ್ ಅವರು ಹೇಳಿದರು.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಕೋರ್ಟ್ ಕಲಾಪಗಳನ್ನು ಅನುಮತಿಯಿಲ್ಲದೆ ಚಿತ್ರೀಕರಿಸುವಂತಿಲ್ಲ. ಸುನೀತಾ ಕೇಜ್ರಿವಾಲ್ ಹಾಗೂ ಇತರರು ಈ ವಿಡಿಯೊವನ್ನು ಮರುಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ ಎಂದು ಕೂಡ ಅವರು ತಿಳಿಸಿದರು.

ಸುನೀತಾ ಸೇರಿದಂತೆ ಆರು ಮಂದಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ಪೀಠವು, ಈ ಪ್ರಕರಣದಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿದೆ. ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.