ADVERTISEMENT

ಕೇಜ್ರಿವಾಲ್ ಬಂಧನ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ:ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಪಿಟಿಐ
Published 3 ಏಪ್ರಿಲ್ 2024, 12:16 IST
Last Updated 3 ಏಪ್ರಿಲ್ 2024, 12:16 IST
<div class="paragraphs"><p>ಅರವಿಂದ ಕೇಜ್ರಿವಾಲ್‌</p></div>

ಅರವಿಂದ ಕೇಜ್ರಿವಾಲ್‌

   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್‌ ಬುಧವಾರ ಕಾಯ್ದಿರಿಸಿತು.

ಕೇಜ್ರಿವಾಲ್‌ ಮತ್ತು ಇ.ಡಿ ಪರ ವಕೀಲರ ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ತೀರ್ಪು ಕಾಯ್ದಿರಿಸಲಿದ್ದೇನೆ ಎಂದರು. 

ADVERTISEMENT

ಎಎಪಿ ನಾಯಕ ಕೇಜ್ರಿವಾಲ್‌ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು, ಕೇಜ್ರಿವಾಲ್‌ ಅವರ ಬಂಧನದ ಸಂದರ್ಭವನ್ನು ಪ್ರಶ್ನಿಸಿದರು. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ಹಾಗೂ ಚುನಾವಣೆಯಲ್ಲಿ ಸಮಾನ ಅವಕಾಶ ಒದಗಿಸಬೇಕು ಎಂಬ ನೀತಿ ಸೇರಿದಂತೆ ಸಂವಿಧಾನದ ಮೂಲ ಸ್ವರೂಪಕ್ಕೆ ಇದು ವಿರುದ್ಧವಾಗಿದೆ ಎಂದು ಹೇಳಿದರು.

ಈ ಅರ್ಜಿಯನ್ನು ವಿರೋಧಿಸಿದ ಜಾರಿ ನಿರ್ದೇಶನಾಲಯ ಪರ ಹಿರಿಯ ವಕೀಲ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು, ‘ಈ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅರ್ಜಿದಾರರ ವಿರುದ್ಧ ಇನ್ನೂ ಆರಂಭಿಕ ಹಂತದ ತನಿಖೆ ನಡೆಯುತ್ತಿದೆ’ ಎಂದರು.

ಜಾರಿ ನಿರ್ದೇಶನಾಲಯವು ಪಕ್ಷಪಾತ ಮಾಡಿದೆ ಎಂಬ ಆರೋಪಗಳನ್ನು ನಿರಾಕರಿಸಿದ ರಾಜು, ‘ಪ್ರಕರಣವು ಪುರಾವೆಗಳನ್ನು ಆಧರಿಸಿದೆ ಮತ್ತು ಅಪರಾಧಿಗಳನ್ನು ಬಂಧಿಸಿ, ಜೈಲಿನಲ್ಲಿರಿಸಬೇಕು’ ‌ಎಂದು ಪ್ರತಿಪಾದಿಸಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ರಕ್ಷಣೆ ನೀಡಲು ಹೈಕೋರ್ಟ್‌ ನಿರಾಕರಿಸಿದ ಬಳಿಕ, ಇ.ಡಿ ಮಾರ್ಚ್‌ 21ರಂದು ಅವರನ್ನು ಬಂಧಿಸಿತ್ತು. ಇ.ಡಿ ಕಸ್ಟಡಿ ಅವಧಿ ಮುಗಿದ ಬಳಿಕ, ವಿಚಾರಣಾ ನ್ಯಾಯಾಲಯವು ಅವರಿಗೆ ಏಪ್ರಿಲ್‌ 1ರಂದು ನ್ಯಾಯಾಂಗ ಬಂಧನ ವಿಧಿಸಿತು.

ಇದಕ್ಕೂ ಮುನ್ನ ಕೇಜ್ರಿವಾಲ್‌ಗೆ ಮಧ್ಯಂತರ ಪರಿಹಾರ ನೀಡಲು ಮಾರ್ಚ್‌ 27ರಂದು ನಿರಾಕರಿಸಿದ್ದ ದೆಹಲಿ ಹೈಕೋರ್ಟ್‌, ಈ ಕುರಿತ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಇ.ಡಿಗೆ ಸೂಚಿಸಿತ್ತು.

ಸಾಕ್ಷ್ಯ ನಾಶ ಕೂಡದು: ಸಿಂಗ್‌ಗೆ ನಿರ್ದೇಶನ

ನವದೆಹಲಿ (ಪಿಟಿಐ): ಎಎಪಿ ನಾಯಕ ಸಂಜಯ್‌ ಸಿಂಗ್‌ ದೆಹಲಿ ಅಬಕಾರಿ ನೀತಿ ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡದಂತೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ದೆಹಲಿ ನ್ಯಾಯಾಲಯ ಬುಧವಾರ ಆದೇಶಿಸಿದೆ.

ತಿಹಾರ್‌ ಜೈಲಿನಿಂದ ಸಿಂಗ್‌ ಅವರನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸುವ ಮುನ್ನ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕೆಲ ಷರತ್ತುಗಳನ್ನು ವಿಧಿಸಿದರು.

ಸಿಂಗ್‌ ಅವರು ಪಾಸ್‌ಪೋರ್ಟ್‌ ಸಲ್ಲಿಸಬೇಕು. ಎನ್‌ಸಿಆರ್‌ನಿಂದ ಹೊರಡುವ ಮುನ್ನ ಪ್ರಯಾಣದ ಬಗ್ಗೆ ತಿಳಿಸಬೇಕು. ತಮ್ಮ ಫೋನ್‌ ಲೋಕೇಷನ್‌ ಸದ ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶರು ನಿರ್ದೇಶಿಸಿದರು.

₹2 ಲಕ್ಷದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಭದ್ರತೆ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದರು. ಸಿಂಗ್‌ ಅವರ ಪತ್ನಿಯೇ ಜಾಮೀನುದಾರರಾಗಲಿದ್ದಾರೆ ಎಂದು ಸಿಂಗ್‌ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.