ನವದೆಹಲಿ: ಫ್ಲ್ಯಾಟ್ ಖರೀದಿದಾರರಿಗೆ ವಂಚನೆ ಪ್ರಕರಣದಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಇತರರನ್ನು ಆರೋಪ ಮುಕ್ತಗೊಳಿಸಿದ್ದ ಆದೇಶವನ್ನು ರದ್ದು ಮಾಡಿದ್ದ ತೀರ್ಪಿಗೆ ದೆಹಲಿ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಪ್ರಕರಣದಲ್ಲಿ ತಮ್ಮನ್ನು ಆರೋಪಮುಕ್ತಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ತೀರ್ಪನ್ನು ರದ್ದು ಮಾಡಿ, ಹೊಸದಾಗಿ ತನಿಖೆ ನಡೆಸಬೇಕು ಎನ್ನುವ ಸೆಷನ್ಸ್ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಗಂಭೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಮಧ್ಯಂತರ ಆದೇಶ ಮಾಡಿರುವ ನ್ಯಾಯಮೂರ್ತಿ ಮಜೋಜ್ ಕುಮಾರ್ ಒಹ್ರಿ, ದೆಹಲಿ ಸರ್ಕಾರದ ಪ್ರತಿಕ್ರಿಯೆ ಕೇಳಿದ್ದಾರೆ.
ಅಕ್ಟೋಬರ್ 29ರ ಆದೇಶದಲ್ಲಿ, ‘ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಆದೇಶವು ಗಂಭೀರ್ ವಿರುದ್ಧದ ಆರೋಪಗಳನ್ನು ನಿರ್ಧರಿಸುವಲ್ಲಿ ಅಸಮರ್ಪಕ ಅಭಿವ್ಯಕ್ತಿಯನ್ನು ಪ್ರತಿಬಿಂಬಿಸುತ್ತದೆ’ ಎಂದು ಸೆಷನ್ಸ್ ಕೋರ್ಟ್ ಹೇಳಿತ್ತು.
‘ಆರೋಪಗಳು, ಪ್ರಕರಣದಲ್ಲಿ ಗೌತಮ್ ಗಂಭೀರ್ ಪಾತ್ರದ ಬಗ್ಗೆ ಹೆಚ್ಚಿನ ತನಿಖೆಗೆ ಅರ್ಹವಾಗಿವೆ’ ಎಂದು ಹೇಳಿತ್ತು.
ರುದ್ರಾ ಬಿಲ್ಡ್ ವೆಲ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್, ಎಚ್.ಆರ್. ಇನ್ಫ್ರಾಸಿಟಿ ಪ್ರೈವೆಟ್ ಲಿಮಿಟೆಡ್, ಯುಎಂ ಆರ್ಕಿಟೆಕ್ಚರ್ಸ್ ಆ್ಯಂಡ್ ಕಂಟ್ರಾಂಕ್ಟರ್ ಲಿಮಿಟೆಡ್ ಮತ್ತು ಕಂಪನಿಗಳ ಜಂಟಿ ಉದ್ಯಮದ ನಿರ್ದೇಶಕ ಮತ್ತು ಬ್ರಾಂಡ್ ಅಂಬಾಸಿಡರ್ ಆಗಿದ್ದ ಗಂಭೀರ್ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.