ನವದೆಹಲಿ: ಅಲೋಪಥಿ ವಿಚಾರದಲ್ಲಿ ಜನರ ದಾರಿ ತಪ್ಪಿಸಬೇಡಿ ಎಂದು ಯೋಗ ಗುರು ಬಾಬಾ ರಾಮದೇವ್‌ಗೆ ದೆಹಲಿ ಹೈಕೋರ್ಟ್ ಬುಧವಾರ ತಾಕೀತು ಮಾಡಿದೆ.
ನೀವು ಅನುಯಾಯಿಗಳನ್ನು ಹೊಂದಲು ಸ್ವತಂತ್ರರು. ಹಾಗೆಂದು ಅಧಿಕೃತವಲ್ಲದ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ಜನರ ದಾರಿ ತಪ್ಪಿಸಬಾರದು ಎಂದು ಕೋರ್ಟ್ ಹೇಳಿದೆ.
ಅಲೋಪಥಿ ಔಷಧ ಪದ್ಧತಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಮತ್ತು ಕೋವಿಡ್‌ಗೆ ಪತಂಜಲಿಯ ‘ಕೊರೊನಿಲ್’ ಬಳಸುವಂತೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಅನೇಕ ವೈದ್ಯರು ರಾಮದೇವ್ ವಿರುದ್ಧ ಮೊಕದ್ದಮೆ ಹೂಡಿದ್ದರು. ಈ ವಿಚಾರವಾಗಿ ನ್ಯಾಯಮೂರ್ತಿ ಅನೂಪ್ ಜೈರಾಂ ಭಂಭಾನಿ ವಿಚಾರಣೆ ನಡೆಸಿದರು.
‘ಆರಂಭದಿಂದಲೂ ನನ್ನ ಕಳಕಳಿ ಇಷ್ಟೇ. ನೀವು (ರಾಮದೇವ್ ಉದ್ದೇಶಿಸಿ) ಅನುಯಾಯಿಗಳನ್ನು ಹೊಂದುವುದಕ್ಕೆ ಅಭ್ಯಂತರವಿಲ್ಲ. ನೀವು ಶಿಷ್ಯರನ್ನು ಹೊಂದುವುದಕ್ಕೆ ಸ್ವಾಗತ. ನೀವು ಹೇಳಿದ್ದನ್ನೆಲ್ಲ ನಂಬುವ ಜನರನ್ನು ನೀವು ಅನುಯಾಯಿಗಳನ್ನಾಗಿ ಹೊಂದಬಹುದು. ಆದರೆ, ದಯಮಾಡಿ ಅಧಿಕೃತವಲ್ಲದ ವಿಚಾರಗಳನ್ನು ಪ್ರತಿಪಾದಿಸಿ ಜನಸಮೂಹವನ್ನು ದಾರಿ ತಪ್ಪಿಸಬಾರದು’ ಎಂದು ನ್ಯಾಯಮೂರ್ತಿ ಹೇಳಿದರು.
ಪತಂಜಲಿ ಆಯುರ್ವೇದ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೊನಿಲ್ ಔಷಧವು ಏಳು ದಿನಗಳಲ್ಲಿ ಕೊರೊನಾ ಸೋಂಕು ನಿವಾರಿಸುತ್ತದೆ ಎಂದು ರಾಮ್‌ದೇವ್ ಹೇಳಿದ್ದರು. ಅಲೋಪಥಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡುವ ಸಾಮರ್ಥ್ಯವಿದೆಯೇ ಎಂಬುದನ್ನು ಪ್ರಶ್ನಿಸಿದ್ದ ರಾಮದೇವ್, ಅಲೋಪಥಿಚಿಕಿತ್ಸಾ ವಿಧಾನದಿಂದ ಲಕ್ಷಾಂತರ ಮಂದಿ ಸಾಯುವಂತಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ದೇಶದಾದ್ಯಂತ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.
ಅಲೋಪತಿ ಔಷಧ ಮತ್ತು ಚಿಕಿತ್ಸೆ ಕುರಿತು ಅವೈಜ್ಞಾನಿಕ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವ ಬಾಬಾ ರಾಮದೇವ್ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಗ್ರಹಿಸಿತ್ತು. ಬಳಿಕ ಹಲವು ವೈದ್ಯರ ಸಂಘಗಳು ದಾಖಲಿಸಿದ್ದ ಮೊಕದ್ದಮೆಯ ಮೇರೆಗೆ ದೆಹಲಿ ಹೈಕೋರ್ಟ್ ರಾಮದೇವ್‌ಗೆ ಸಮನ್ಸ್ ನೀಡಿತ್ತು.
ಬಳಿಕ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜತೆಗಿನ ತಿಕ್ಕಾಟದ ಕುರಿತು ಪ್ರತಿಕ್ರಿಯಿಸಿದ್ದ ರಾಮದೇವ್, ‘ನಾನು ಯಾವುದೇ ಸಂಘಟನೆಯೊಂದಿಗೆ ದ್ವೇಷ ಹೊಂದಿಲ್ಲ. ಔಷಧಿಗಳ ಹೆಸರಿನಲ್ಲಿ ಜನರ ಮೇಲೆ ನಡೆಯುವ ಶೋಷಣೆಗೆ ನನ್ನ ವಿರೋಧ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.