ನವದೆಹಲಿ: ಮುನಾಕ್ ಕಾಲುವೆಗೆ ಬಿದ್ದಿದ್ದ ಕಾರೊಂದನ್ನು ಶುಕ್ರವಾರ ಹೊರಗೆ ತೆಗೆಯಲಾಗಿದೆ. ಆದರೆ, ಅದರಲ್ಲಿ ವ್ಯಕ್ತಿಯೊಬ್ಬರ ಅಸ್ತಿಪಂಜರವೂ ಪತ್ತೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮುನಾಕ್ ಕಾಲುವೆ ಮೂಲಕ ಹರಿಯಾಣದಿಂದ ದೆಹಲಿಗೆ ನೀರು ಸರಬರಾಜು ಮಾಡಲಾಗುತ್ತದೆ. ಜಖಂ ಗೊಂಡಿದ್ದ ಕಾರು ಗುರುವಾರ ತಡರಾತ್ರಿಯೇ ಕಾಲುವೆಯಲ್ಲಿ ಕಾಣಿಸುತ್ತಿತ್ತು. ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ಬಳಿಕ ಕಾರನ್ನು ಹೊರಗೆ ತೆಗೆಯಲಾಗಿದೆ. ಅದರಲ್ಲಿ ಅಸ್ತಿಪಂಜರ ಪತ್ತೆಯಾಗಿರುವ ಸುದ್ದಿ ಹರಡುತ್ತಿದ್ದಂತೆ, ನೀರಿನ ಬಳಕೆ ಬಗ್ಗೆ ಸ್ಥಳೀಯರಲ್ಲಿ ಆತಂಕ ಎದುರಾಗಿದೆ ಎಂದಿದ್ದಾರೆ.
ಅಸ್ತಿಪಂಜರವು ವಿಜಯ ವಿಹಾರದ ಬುದ್ಧ ವಿಹಾರದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದ ವಿನೋದ್ ಎಂಬವರದ್ದು ಎಂದು ಶಂಕಿಸಲಾಗಿದೆ. ವಿನೋದ್ ವೃತ್ತಿಯಿಂದ ಟ್ಯಾಕ್ಸಿ ಚಾಲಕನಾಗಿದ್ದರು. ಸದ್ಯ ಪತ್ತೆಯಾಗಿರುವ 'ಸ್ವಿಫ್ಟ್ ಡಿಸೈರ್' ಕಾರು ಅವರ ಹೆಸರಿನಲ್ಲೇ ನೋಂದಣಿಯಾಗಿದೆ. ವಿನೋದ್ ಅವರ ಮಗ ರವಿ ಕಾರನ್ನು ಗುರುತಿಸಿದ್ದಾರೆ. ಹೀಗಾಗಿ, ಅಸ್ತಿಪಂಜರ ವಿನೋದ್ ಅವರದ್ದೇ ಎಂಬುದಾಗಿ ಶಂಕಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಮ್ಮ ತಂದೆಯೊಂದಿಗೆ 2020ರ ಸೆಪ್ಟೆಂಬರ್ 30ರಂದು ಕೊನೇ ಸಲ ಮಾತನಾಡಿದ್ದಾಗಿ ರವಿ 'ಪಿಟಿಐ'ಗೆ ತಿಳಿಸಿದ್ದಾರೆ.
'ಪ್ರಯಾಣಿಕರೊಬ್ಬರನ್ನು ದ್ವಾರಕಾಗೆ ಕರೆದುಕೊಂಡು ಹೋಗುತ್ತಿರುವುದಾಗಿ ಮತ್ತು ನಂತರ ಮನೆಗೆ ಬರುವುದಾಗಿ ಅವರು ಹೇಳಿದ್ದರು. ಆದರೆ, ಅದಾದ ನಂತರ ಅವರ ಮೊಬೈಲ್ ನಾಟ್‌ರೀಚಬಲ್ ಆಗಿತ್ತು' ಎಂದಿದ್ದಾರೆ.
'ಈ ಸಂಬಂಧ ವಿಜಯ ವಿಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಆದಾಗ್ಯೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನನ್ನ ತಂದೆ 2019ರಲ್ಲಿ ಈ ಕಾರನ್ನು ಖರೀದಿಸಿದ್ದರು. ಅಸ್ತಿಪಂಜರ ಅವರದ್ದೇ ಎಂಬುದನ್ನು ಈಗಲೂ ನಂಬಲಾಗುತ್ತಿಲ್ಲ' ಎಂದು ನೊಂದು ನುಡಿದಿದ್ದಾರೆ.
'ಶವಪರೀಕ್ಷೆ ಬಳಿಕ ಪೊಲೀಸರು ಅಸ್ತಿಪಂಜರವನ್ನು ನೀಡಿದರು. ಡಿಎನ್ಎ ಪರೀಕ್ಷೆ ನಡೆಸುವುದಾಗಿಯೂ ತಿಳಿಸಿದ್ದಾರೆ. ನಾವು ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ. ಆದರೆ, ನಮ್ಮ ತಂದೆ ಬದುಕಿದ್ದಾರೆ ಎಂಬ ನಂಬಿಕೆ ಈಗಲೂ ಇದೆ' ಎಂದೂ ಹೇಳಿದ್ದಾರೆ.
ಸದ್ಯದ ಸಾಕ್ಷ್ಯಗಳ ಆಧಾರದಲ್ಲಿ ಅಸ್ತಿಪಂಜರ ವಿನೋದ್ ಅವರದ್ದೇ ಎಂದು ಶಂಕಿಸಲಾಗಿದೆ. ಆದರೆ, ಯಾವುದೇ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಡಿಎನ್‌ಎ ಪರೀಕ್ಷೆಗಾಗಿ ಅಸ್ತಿಪಂಜರದ ಮಾದರಿಯನ್ನು ಸಂಗ್ರಹಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.