ನವದೆಹಲಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯಿಂದ ಪ್ರೇರಿತನಾಗಿ, ಶಸ್ತ್ರಾಸ್ತ್ರಗಳೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತನನ್ನು ಹರಿಯಾಣದ ಝಜ್ಜರ್‌ನ ಆಕಾಶ್ ಎಂದು ಗುರುತಿಸಲಾಗಿದೆ. ಆತ ಜೈಲಿನಲ್ಲಿರುವ ಬಿಷ್ಣೋಯಿ ಮತ್ತು ಅವನ ಗ್ಯಾಂಗ್‌ನಿಂದ ಪ್ರೇರಣೆಗೊಂಡಿದ್ದ. ಕುಖ್ಯಾತಿ ಗಳಿಸುವುದಕ್ಕಾಗಿ ಶಸ್ತ್ರಾಸ್ತ್ರಗಳೊಂದಿಗಿನ ಫೋಟೊಗಳನ್ನು ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
'ದ್ವಾರಕಾ' ಡಿಸಿಪಿ ಅಂಕಿತ್ ಸಿಂಗ್, ಸಾಮಾಜಿಕ ಮಾಧ್ಯಮಗಳ ಮೂಲಕ ಸಕ್ರಿಯವಾಗಿರುವ ಅಪರಾಧಿಗಳ ಮೇಲೆ ಕಣ್ಣಿಡುವುದಕ್ಕಾಗಿಯೇ ಒಂದು ತಂಡವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
'ಆಕಾಶ್, ಬಂದೂಕುಗಳೊಂದಿಗೆ ಇರುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಂತೆ ನಮ್ಮ ತಂಡ ಕಾರ್ಯಪ್ರವೃತ್ತವಾಗಿತ್ತು. ಗುಪ್ತಚರ ಮಾಹಿತಿ ಆಧರಿಸಿ, ಮಿತ್ರಾನ್ ಕೈರ್ ರಸ್ತೆಯಲ್ಲಿರುವ ಬಸ್ ಡಿಪೋ ಸಮೀಪ ಅವನನ್ನು ಅಕ್ಟೋಬರ್ 15ರಂದು ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ.
ಆತನಿಂದ ನಾಡಪಿಸ್ತೂಲು, ಕಾರ್ಟ್ರಿಡ್ಜ್ ವಶಕ್ಕೆ ಪಡೆಯಲಾಗಿದೆ. ಜಾಫರ್‌ಪುರ ಕಲಾನ್ ಪೊಲೀಸ್ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಲಾರೆನ್ಸ್ ಬಿಷ್ಣೋಯಿ ರೀತಿ ಕುಖ್ಯಾತಿ ಗಳಿಸಲು ಬಯಸಿದ್ದಾಗಿ ವಿಚಾರಣೆ ವೇಳೆ ಆಕಾಶ್ ಹೇಳಿಕೊಂಡಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಆತನಿಗೆ 9 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.