ADVERTISEMENT

ಕೇಜ್ರಿವಾಲ್ ಆರೋಪಗಳು ದಾರಿ ತಪ್ಪಿಸುವ, ಅವಹೇಳನಕಾರಿಯಾಗಿವೆ: ಲೆ. ಗವರ್ನರ್

ಪಿಟಿಐ
Published 20 ಜನವರಿ 2023, 8:07 IST
Last Updated 20 ಜನವರಿ 2023, 8:07 IST
   

ನವದೆಹಲಿ: ದೇಶದ ರಾಜಧಾನಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವಿನ ಸಂಘರ್ಷ ತಾರಕಕ್ಕೇರಿದೆ.

ಕೇಜ್ರಿವಾಲ್ ಆರೋಪಗಳಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಪತ್ರದ ಮೂಲಕ ಉತ್ತರಿಸಿದ್ದಾರೆ.

ಕೇಜ್ರಿವಾಲ್ ಆರೋಪಗಳು ದಾರಿ ತಪ್ಪಿಸುವ, ಅವಹೇಳನಕಾರಿ ಮತ್ತು ಕೀಳುಮಟ್ಟದವುಗಳಾಗಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಫಿನ್‌ಲ್ಯಾಂಡ್‌ಗೆ ಶಿಕ್ಷಕರ ತರಬೇತಿ ಪ್ರವಾಸವನ್ನು ಲೆಫ್ಟಿನೆಂಟ್ ಗವರ್ನರ್ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ಅವರ ಕಚೇರಿವರೆಗೆ ಶಾಸಕರ ಜೊತೆ ಕೇಜ್ರಿವಾಲ್, ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಬಳಿಕ, ಶಾಸಕರ ಭೇಟಿಗೂ ಗವರ್ನರ್ ನಿರಾಕರಿಸಿದರು ಎಂಬ ಕೇಜ್ರಿವಾಲ್ ಆರೋಪವನ್ನು ಪ್ರಮುಖವಾಗಿ ಸಕ್ಸೇನಾ ಪ್ರಸ್ತಾಪಿಸಿದ್ದಾರೆ.

ನನ್ನನ್ನು ಭೇಟಿ ಮಾಡಲು ಕೇಜ್ರಿವಾಲ್ ಅವರಿಗೆ ಆಹ್ವಾನ ನೀಡಿದ್ದೆ. ಆದರೆ, ಅವರು ಎಲ್ಲ ಶಾಸಕರ ಜೊತೆಗೇ ಭೇಟಿ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳುವ ಮೂಲಕ ಭೇಟಿಗೆ ಬರಲಿಲ್ಲ ಎಂದಿದ್ದಾರೆ.

ಕೇಜ್ರಿವಾಲ್ ಅವರ ದಿಢೀರ್ ಬೇಡಿಕೆ, ಕಡಿಮೆ ಸಮಯ ಇದ್ದುದರಿಂದ ಹಾಗೂ ಒಟ್ಟೊಟ್ಟಿಗೆ 70–80 ಶಾಸಕರ ಭೇಟಿಗೆ ಸೂಕ್ತ ಕಾರಣವೂ ನೀಡದ್ದರಿಂದ ಭೇಟಿಗೆ ಅವಕಾಶ ನೀಡಲಾಗಿಲ್ಲ ಎಂದು ಸಕ್ಸೇನಾ ಸ್ಪಷ್ಟನೆ ನೀಡಿದ್ದಾರೆ.

‘ಈ ವಿಷಯವನ್ನು ನೀವು ರಾಜಕೀಯಕ್ಕೆ ಅನುಕೂಲಕರವಾಗುವಂತೆ ‘ಲೆಫ್ಟಿನೆಂಟ್ ಗವರ್ನರ್ ನನ್ನ ಭೇಟಿಗೆ ನಿರಾಕರಿಸಿದರು’ ಎಂದು ಹೇಳಿಕೆ ನೀಡಿರುವುದು ದುರದೃಷ್ಟಕರ’ ಎಂದಿದ್ದಾರೆ.

‘ನಗರದಲ್ಲಿ ಗಂಭೀರ ಅಭಿವೃದ್ಧಿ ಸಮಸ್ಯೆಗಳು ಇರುವಾಗ ನೀವು ನನ್ನನ್ನು ಭೇಟಿಯಾಗಿ ಅವುಗಳಿಗೆ ಪರಿಹಾರ ಕಂಡುಹಿಡಿಯುವುದನ್ನು ಬಿಟ್ಟು ಪ್ರತಿಭಟನೆ ನಡೆಸುತ್ತಿರುವುದನ್ನು ಕಂಡು ನಾನು ಬೆರಗಾಗಿದ್ದೇನೆ’ ಎಂದು ಲೆ. ಗವರ್ನರ್ ಸೂಚ್ಯವಾಗಿ ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಹೆಡ್ ಮಾಸ್ಟರ್ ರೀತಿ ವರ್ತಿಸುತ್ತಿದ್ದಾರೆ ಎಂದು ಎರಡು ದಿನಗಳ ಹಿಂದೆ, ವಿಧಾನಸಭೆಯಲ್ಲಿ ಕೇಜ್ರಿವಾಲ್ ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ಉಲ್ಲೇಖಿಸಿರುವ ಸಕ್ಸೇನಾ, ‘ನಾನು ಹೆಡ್ ಮಾಸ್ಟರ್ ರೀತಿ ವರ್ತಿಸುತ್ತಿಲ್ಲ. ಸಂವಿಧಾನದತ್ತವಾದ ಜನರ ಧ್ವನಿಯಾಗಿ ವರ್ತಿಸುತ್ತಿದ್ದೇನೆ’ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.