ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 500 ಎಲೆಕ್ಟ್ರಿಕ್ ಬಸ್‌ಗಳಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು (ಗುರುವಾರ) ಚಾಲನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಕ್ಸೇನಾ, ‘ನಾವು ಇಂದು 500 ಎಲೆಕ್ಟ್ರಿಕ್ ಬಸ್‌ಗಳನ್ನು ಹೊರತಂದಿದ್ದೇವೆ. ಇವು ಮಾಲಿನ್ಯ ರಹಿತ ಬಸ್‌ಗಳಾಗಿವೆ. ದೆಹಲಿಯಲ್ಲಿ ಸಂಚಾರ ವ್ಯವಸ್ಥೆ ಉತ್ತಮಗೊಳಿಸಲು ನಾವು ಇಂತಹ ಕೆಲಸಗಳನ್ನು ಮುಂದುವರಿಸುತ್ತೇವೆ’ ಎಂದು ತಿಳಿಸಿದರು.
ಈ 500 ಬಸ್ ಸೇರಿ ದೆಹಲಿಯಲ್ಲಿ ಈಗ 1,300 ಎಲೆಕ್ಟ್ರಿಕ್ ಬಸ್‌ಗಳಿವೆ. ಸದ್ಯ, ದೇಶದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ ಹೊಂದಿರುವ ರಾಜ್ಯ ನಮ್ಮದು ಎಂದು ದೆಹಲಿ ಸರ್ಕಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್, ‘ನಾನು ಈ ಸಂದರ್ಭದಲ್ಲಿ ದೆಹಲಿಯ ಜನರನ್ನು ಅಭಿನಂದಿಸಲು ಬಯಸುತ್ತೇನೆ. ಅಲ್ಲದೆ, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯು ಈ ಸಮಾರಂಭಕ್ಕಾಗಿ ಸಮಯ ಮಾಡಿಕೊಂಡಿರುವುದಕ್ಕಾಗಿ ಗವರ್ನರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಪ್ರಸ್ತುತ ದೆಹಲಿಯಲ್ಲಿ 1,300 ಎಲೆಕ್ಟ್ರಿಕ್ ಬಸ್‌ಗಳಿವೆ. ದೆಹಲಿ ಸಾರಿಗೆ ವ್ಯವಸ್ಥೆಯನ್ನು ನಾವು ಮತ್ತಷ್ಟು ಬಲಪಡಿಸಲಿದ್ದೇವೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಾರಿಗೆ ಸಚಿವ ಕೈಲಾಶ್ ಗೆಹಲೋತ್, ‘500 ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡುವ ಮೂಲಕ ಇಂದು ನಾವು ದೊಡ್ಡ ಮೈಲಿಗಲ್ಲನ್ನು ಆಚರಿಸುತ್ತಿದ್ದೇವೆ. ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆಯು ಮಾಲಿನ್ಯ ವಿರುದ್ಧದ ಹೋರಾಟದಲ್ಲಿ ಒಂದು ಪ್ರಮುಖವಾದ ಹೆಜ್ಜೆಯಾಗಿದೆ’ ಎಂದು ಹೇಳಿದರು.
ಹೊಸ ಬಸ್‌ಗಳು ಹವಾನಿಯಂತ್ರಿತ, ಆರಾಮದಾಯಕ ಆಸನಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳು ಹಾಗೂ ಪ್ಯಾನಿಕ್ ಬಟನ್‌ಗಳನ್ನು ಹೊಂದಿವೆ. ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಜನರಿಗೆ ತೊಂದರೆ ಎದುರಾದರೆ, ಅವರು ಪ್ಯಾನಿಕ್ ಬಟನ್ ಅನ್ನು ಒತ್ತಬಹುದು. ಇದು ತಕ್ಷಣವೇ ನಿಯಂತ್ರಣ ಕೇಂದ್ರಕ್ಕೆ (ಕಂಟ್ರೋಲ್ ಸೆಂಟರ್) ಮಾಹಿತಿ ನೀಡುತ್ತದೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.