ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಗರಣದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಹೊಸದಾಗಿ ಸಾಕ್ಷ್ಯ ದೊರಕಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ದೆಹಲಿಯ ನ್ಯಾಯಾಲಯವೊಂದಕ್ಕೆ ಬುಧವಾರ ಹೇಳಿದೆ.
ಈ ಪ್ರಕರಣದ ವಿಚಾರಣೆಯು ಈಗ ನಿರ್ಣಾಯಕ ಹಂತದಲ್ಲಿದೆ, ಸಿಸೋಡಿಯಾ ಅವರು ಸಲ್ಲಿಸಿರುವ ಜಮೀನು ಅರ್ಜಿ ಕುರಿತು ವಾದ ಮಂಡಿಸಲು ಸಮಯಾವಕಾಶ ನೀಡುವಂತೆ ಇ.ಡಿ ಕೋರಿತು.
ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರು ಜಾಮೀನು ಅರ್ಜಿ ಕುರಿತ ವಾದಮಂಡನೆಯನ್ನು ಏಪ್ರಿಲ್ 12ಕ್ಕೆ ನಿಗದಿಪಡಿಸಿದರು. ಜೊತೆಗೆ, ಇ.ಡಿ ಮನವಿ ಮೇರೆಗೆ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಏಪ್ರಿಲ್ 17ರ ವರೆಗೆ ವಿಸ್ತರಿಸಿದರು.
‘ಇ.ಡಿ. ಬಳಿ ಸಿಸೋಡಿಯಾ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಅವರು ಎಲ್ಲಾ ರೀತಿಯ ತನಿಖೆಗಳನ್ನೂ ನಡೆಸಿದ್ದಾರೆ. ನನ್ನ ಮನೆಯ ಮೇಲೂ ದಾಳಿ ನಡೆಸಿದ್ದಾರೆ. ದೆಹಲಿಯ ಲೆಫ್ಟಿನಂಟ್ ಗವರ್ನರ್ ಸೇರಿ ಸಂಬಂಧಪಟ್ಟ ಹಲವು ಅಧಿಕಾರಿಗಳು ಅಬಕಾರಿ ನೀತಿಗೆ ಅನುಮೋದನೆ ನೀಡಿದ್ದಾರೆ. ಈಗ ಸಿಸೋಡಿಯಾ ಅವರನ್ನು ಮಾತ್ರ ದೂರಲಾಗುತ್ತಿದೆ’ ಎಂದು ಸಿಸೋಡಿಯಾ ಪರ ವಕೀಲರು ತಿಳಿಸಿದರು.
***
ನನ್ನ ಬಳಿ ಸಂಪುಟದ ಯಾವ ಖಾತೆಯೂ ಇಲ್ಲ. ಸಾಕ್ಷ್ಯಗಳನ್ನು ತಿರುಚಲು ನಾನು ಪ್ರಯತ್ನಿಸುತ್ತಿರುವ ಕುರಿತು ನನ್ನ ಮೇಲೆ ಈ ವೆರೆಗೂ ಆರೋಪ ಮಾಡಲಾಗಿಲ್ಲ
- ಮನೀಶ್ ಸಿಸೋಡಿಯಾ, ದೆಹಲಿ ಮಾಜಿ ಉಪ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.