ADVERTISEMENT

ರಹಸ್ಯ ಕಾರ್ಯಾಚರಣೆಯ ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ

ದೆಹಲಿ ಅಬಕಾರಿ ಹಗರಣ: ಬಿಜೆಪಿ–ಎಎಪಿ ತಿಕ್ಕಾಟ ಮುಂದುವರಿಕೆ

ಪಿಟಿಐ
Published 5 ಸೆಪ್ಟೆಂಬರ್ 2022, 16:09 IST
Last Updated 5 ಸೆಪ್ಟೆಂಬರ್ 2022, 16:09 IST
ಸಂಬಿತ್‌ ಪಾತ್ರಾ
ಸಂಬಿತ್‌ ಪಾತ್ರಾ   

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ಸಂಬಂಧಿಸಿದ ರಹಸ್ಯ ಕಾರ್ಯಾಚರಣೆಯ ವಿಡಿಯೊವೊಂದನ್ನು ಸೋಮವಾರ ಬಿಡುಗಡೆ ಮಾಡಿದೆ. ಆ ಮೂಲಕ ಆಮ್‌ ಆದ್ಮಿ ಪಕ್ಷದ (ಎಎಪಿ) ಮೇಲೆ ದಾಳಿ ಮುಂದುವರಿಸಿದೆ.

‘ಅಬಕಾರಿ ಹಗರಣದ ಆರೋಪಿಯಾಗಿರುವ ಸನ್ನಿ ಮರ್ವಾಹ್ ಅವರ ತಂದೆ ಕುಲ್ವಿಂದರ್‌ ಮರ್ವಾಹ್‌ ಅವರುಅಬಕಾರಿ ಪರವಾನಗಿ ಪಡೆಯಲು ಕಮಿಷನ್‌ ನೀಡಿದ್ದಾಗಿ ವಿಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮನೀಷ್‌ ಸಿಸೋಡಿಯಾ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದೆ.

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಅದೇಶ್‌ ಗುಪ್ತಾ ಮತ್ತು ಸಂಸದ ಮನೋಜ್‌ ತಿವಾರಿ ಅವರು ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ವಿಡಿಯೊ ಬಿಡುಗಡೆ ಮಾಡಿದರು.

ADVERTISEMENT

‘ಶೇ 80ರಷ್ಟು ಆದಾಯವು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಸಿಸೋಡಿಯಾ ಹಾಗೂ ಅವರ ಸ್ನೇಹಿತರಿಗೆ ಸೇರುತ್ತದೆ. ಪರವಾನಗಿ ಪಡೆಯುವವರು ಮೊದಲು ಶೇ 80ರಷ್ಟು ಕಮಿಷನ್‌ ಕೊಟ್ಟುಬಿಡಬೇಕು. ಶೇ 20ರಷ್ಟು ಸರಕನ್ನು ಎಷ್ಟು ಬೆಲೆಗೆ ಬೇಕಾದರೂ ಮಾರಾಟ ಮಾಡಿಕೊಳ್ಳಬಹುದು ಎಂದು ಮರ್ವಾಹ್ ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಇದು ಕೇಜ್ರಿವಾಲ್‌ ಅವರ ನೀತಿಯೇ’ ಎಂದು ಪಾತ್ರಾ ಪ್ರಶ್ನಿಸಿದ್ದಾರೆ.

‘ವಿಡಿಯೊದಲ್ಲಿಕುಲ್ವಿಂದರ್‌ ಅವರು ಹಗರಣದ ಎಳೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ. ದೆಹಲಿ ಸರ್ಕಾರವು ಕಪ್ಪು ಪಟ್ಟಿಯಲ್ಲಿರುವ ಕಂಪನಿಗಳಿಗೂ ಪರವಾನಗಿ ನೀಡಿರುವುದು ವಿಡಿಯೊದಿಂದ ಬಹಿರಂಗವಾಗಿದೆ. ಈ ನೀತಿಯ ಮೂಲಕ ಬಿಳಿ ಹಣವನ್ನು ಕಪ್ಪು ಹಣವನ್ನಾಗಿ ಪರಿವರ್ತಿಸಿ ಅದನ್ನು ಕೇಜ್ರಿವಾಲ್‌ ಹಾಗೂ ಸಿಸೋಡಿಯಾಗೆ ರವಾನಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

‘ನೂತನ ಅಬಕಾರಿ ನೀತಿ ಬಗ್ಗೆ ನಾವು ಕೇಜ್ರಿವಾಲ್‌ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದೆವು. ಆ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ. ಹೀಗಾಗಿ ರಹಸ್ಯ ಕಾರ್ಯಾಚರಣೆ ಮೂಲಕ ಅವರ ಬಣ್ಣ ಬಯಲು ಮಾಡಲು ಮುಂದಾಗಿದ್ದೇವೆ’ ಎಂದಿದ್ದಾರೆ.

*

‘ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಬಯಲಿಗೆಳೆಯಲು ಬಿಜೆಪಿ ರಹಸ್ಯ ಕಾರ್ಯಾಚರಣೆ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ. ಪ್ರಕರಣದಲ್ಲಿ ಸಿಬಿಐ ನನಗೆ ಕ್ಲೀನ್‌ ಚಿಟ್‌ ನೀಡಿದೆ.
– ಮನೀಷ್‌ ಸಿಸೋಡಿಯಾ, ದೆಹಲಿ ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.