ADVERTISEMENT

ಸ್ತನಕ್ಕೆ ಕಿತ್ತಳೆ ಹೋಲಿಕೆ: ಯುವರಾಜ್ ಸಂಸ್ಥೆಯ ಜಾಹೀರಾತು ತೆಗೆದ ದೆಹಲಿ ಮೆಟ್ರೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2024, 13:28 IST
Last Updated 24 ಅಕ್ಟೋಬರ್ 2024, 13:28 IST
   

ನವದೆಹಲಿ: ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ ದೆಹಲಿ ಮೆಟ್ರೊ ರೈಲ್ವೆ ಕಾರ್ಪೋರೇಷನ್‌(ಡಿಎಮ್‌ಆರ್‌ಸಿ) ಮೆಟ್ರೊ ರೈಲುಗಳಲ್ಲಿ ಪ್ರದರ್ಶಿಸಲಾಗುತ್ತಿದ್ದ ‘ಸ್ತನ ಕ್ಯಾನ್ಸರ್‌ ಜಾಗೃತಿ’ ಕುರಿತ ಜಾಹೀರಾತುಗಳನ್ನು ತೆಗೆದು ಹಾಕಲು ನಿರ್ಧರಿಸಿದೆ.

‘ಸ್ತನ ಕ್ಯಾನ್ಸರ್ ಜಾಗೃತಿ’ ಸಪ್ತಾಹದ ಪ್ರಯುಕ್ತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ‘YouWeCan’ ಸಂಸ್ಥೆ ನಡೆಸಿದ ಈ ಅಭಿಯಾನದಲ್ಲಿ ಸ್ತನಗಳನ್ನು ಕಿತ್ತಳೆ ಹಣ್ಣಿಗೆ ಹೋಲಿಸಿ ಜಾಹೀರಾತು ಪ್ರಕಟಿಸಲಾಗಿತ್ತು.

ಎಐ ಜನರೇಟೆಡ್‌ ಮಹಿಳೆಯರು ಕಿತ್ತಳೆ ಹಣ್ಣುಗಳನ್ನು ಹಿಡಿದುಕೊಂಡಿರುವ ಹಾಗೆ ಜಾಹೀರಾತಿನಲ್ಲಿ ತೋರಿಸಲಾಗಿದ್ದು, ‘ತಿಂಗಳಲ್ಲಿ ಒಂದು ಬಾರಿ ನಿಮ್ಮ ಕಿತ್ತಳೆಗಳನ್ನು ಪರಿಶೀಲಿಸಿ’ ಎಂದು ಜಾಹೀರಾತಿಗೆ ಒಕ್ಕಣೆ ಕೊಡಲಾಗಿತ್ತು.

ADVERTISEMENT

ಸ್ತನಗಳನ್ನು ಕಿತ್ತಳೆ ಹಣ್ಣಿಗೆ ಹೋಲಿಸಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಮೆಟ್ರೊ ಪ್ರಯಾಣಿಕರೂ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದಾದ ಬೆನ್ನಲ್ಲೇ ಜಾಹೀರಾತು ತೆಗೆದುಹಾಕಲು ಡಿಎಮ್‌ಆರ್‌ಸಿ ಮುಂದಾಗಿದೆ.

‘ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಜಾಹೀರಾತುಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದೇವೆ. ಸ್ತನ ಕ್ಯಾನ್ಸರ್‌ ಕುರಿತ ಜಾಹೀರಾತುವನ್ನು ಒಂದು ರೈಲಿನಲ್ಲಿ ಮಾತ್ರ ಪ್ರದರ್ಶಿಸಲಾಗಿತ್ತು. ಬುಧವಾರ ರಾತ್ರಿ 7.45ರ ವೇಳೆ ಆ ಜಾಹೀರಾತನ್ನು ತೆಗೆದು ಹಾಕಲಾಗಿದೆ’ ಎಂದು ಡಿಎಮ್‌ಆರ್‌ಸಿ ಎಕ್ಸ್‌ನಲ್ಲಿ ತಿಳಿಸಿದೆ.

‘ಇಂತಹ ವಿಚಾರಗಳನ್ನು ಡಿಎಮ್‌ಆರ್‌ಸಿ ಪ್ರೋತ್ಸಾಹಿಸುವುದಿಲ್ಲ. ಮೆಟ್ರೊ ಆವರಣದಲ್ಲಿ ಅನುಚಿತ ಜಾಹೀರಾತುಗಳು ಪ್ರದರ್ಶನಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.