ADVERTISEMENT

ಎಸಿಬಿ ದಾಳಿ: ಶಾಸಕ ಅಮಾನತುಲ್ಲಾ ಖಾನ್ ಆಪ್ತ ಸಹಾಯಕನ ಸೆರೆ

ದಾಳಿಯ ವೇಳೆ ₹12 ಲಕ್ಷ ನಗದು ಮತ್ತು ಬಂದೂಕು ವಶ

ಪಿಟಿಐ
Published 17 ಸೆಪ್ಟೆಂಬರ್ 2022, 11:08 IST
Last Updated 17 ಸೆಪ್ಟೆಂಬರ್ 2022, 11:08 IST
ದೆಹಲಿ ವಕ್ಫ್‌ ಮಂಡಳಿ ಅಧ್ಯಕ್ಷ ಹಾಗೂ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರ ಸಹಾಯಕರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದ ಎಸಿಬಿ ನಗದು, ಪಿಸ್ತೂಲು ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದೆ –ಪಿಟಿಐ ಚಿತ್ರ 
ದೆಹಲಿ ವಕ್ಫ್‌ ಮಂಡಳಿ ಅಧ್ಯಕ್ಷ ಹಾಗೂ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರ ಸಹಾಯಕರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದ ಎಸಿಬಿ ನಗದು, ಪಿಸ್ತೂಲು ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದೆ –ಪಿಟಿಐ ಚಿತ್ರ    

ನವದೆಹಲಿ: ಭ್ರಷ್ಟಾಚಾರ ವಿರೋಧಿ ದಳವು (ಎಸಿಬಿ) ದಾಳಿ ನಡೆಸಿದ ಬಳಿಕ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಆಪ್ತ ಹಮೀದ್ ಅಲಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಜಾಮಿಯಾ ನಗರದ ನಿವಾಸಿ ಅಲಿ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದೆಹಲಿ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ವಕ್ಫ್ ಮಂಡಳಿಯಲ್ಲಿ ಅಕ್ರಮ ನೇಮಕಾತಿ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಶುಕ್ರವಾರ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿ, ಮಂಡಳಿಯ ಅಧ್ಯಕ್ಷರೂ ಆಗಿರುವ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಿತ್ತು.

ADVERTISEMENT

ದಾಳಿ ಮಾಡಿದ ಸ್ಥಳಗಳಲ್ಲಿ ಅಲಿ ಅವರಿಗೆ ಸೇರಿದ ಸ್ಥಳಗಳೂ ಇದ್ದವು. ಈ ವೇಳೆ ಲೈಸೆನ್ಸ್‌ರಹಿತವಾದ ಪಿಸ್ತೂಲು, ₹ 12 ಲಕ್ಷ ನಗದು ಹಾಗೂ ಕೆಲವು ಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಸರ್ ಇಮಾಮ್ ಸಿದ್ಧಿಕಿ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಆತನ ಮನೆಯಲ್ಲಿ ನಾಡಪಿಸ್ತೂಲು, ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧನ ಭೀತಿಯಲ್ಲಿದ್ದ ಕೌಸರ್ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ವಕ್ಫ್ ಮಂಡಳಿಯಲ್ಲಿ ಹಣಕಾಸು ದುರುಪಯೋಗ ಮತ್ತು ಇತರ ಅಕ್ರಮಗಳ ಆರೋಪದ ಪ್ರಕರಣದಲ್ಲಿ ಎಸಿಬಿಯು ಖಾನ್ ಅವರಿಗೆ ಈ ಹಿಂದೆ ಸಮನ್ಸ್ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.