ADVERTISEMENT

ದೆಹಲಿ ಸದನದಲ್ಲಿ ಲಂಚದ ಹಣ ಪ್ರದರ್ಶಿಸಿದ ಶಾಸಕ

ಆಡಳಿತ ಪಕ್ಷದ ಶಾಸಕರ ಪ್ರತಿಭಟನೆ; ದಿನದ ಮಟ್ಟಿಗೆ ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 14:34 IST
Last Updated 18 ಜನವರಿ 2023, 14:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‌ನವದೆಹಲಿ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ತಾತ್ಕಾಲಿಕ ಸಿಬ್ಬಂದಿ ನೇಮಕ ಸಂಬಂಧ ಗುತ್ತಿಗೆದಾರನೊಬ್ಬ ಲಂಚ ನೀಡಲು ಪ್ರಯತ್ನಿಸಿದ್ದಾನೆಂದು ಆರೋಪಿಸಿ ಆಡಳಿತ ಪಕ್ಷ ಆಮ್‌ ಆದ್ಮಿಯ ಶಾಸಕ ಮಹೇಂದರ್‌ ಗೋಯಲ್ ಅವರು ಬುಧವಾರ ದೆಹಲಿ ವಿಧಾನಸಭೆಯಲ್ಲಿ ಲಂಚದ ಹಣ ಪ್ರದರ್ಶಿಸಿ ಕೋಲಾಹಲ ಸೃಷ್ಟಿಸಿದರು.

ರೋಹಿಣಿಯಲ್ಲಿನ ಬಾಬಾಸಾಹೇಬ್‌ ಅಂಬೇಡ್ಕರ್ ಆಸ್ಪತ್ರೆಯಲ್ಲಿ ತಾತ್ಕಾಲಿಕ ಸಿಬ್ಬಂದಿ ನೇಮಕದಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಗೋಯಲ್‌ ಅವರು ತಮ್ಮ ಬಾಯಿ ಮುಚ್ಚಿಸಲು ಯತ್ನಿಸುತ್ತಿರುವ ‘ಬಲಾಢ್ಯ’ರಿಂದ ಜೀವ ಬೆದರಿಕೆ ಇದೆ ಎಂದು ಸದನದಲ್ಲಿ ಹೇಳಿದರು.

‘ನನ್ನ ಜೀವ ಅಪಾಯದಲ್ಲಿದೆ. ನನಗೆ ರಕ್ಷಣೆ ಬೇಕು. ಖಾಸಗಿ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ರಿಥಾಲಾ ಕ್ಷೇತ್ರದ ಶಾಸಕ ಮನವಿ ಮಾಡಿದರು.

ADVERTISEMENT

ಕಲಾಪ ಮುಂದೂಡಿಕೆ:

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ಮುಖ್ಯ ಕಾರ್ಯದರ್ಶಿ, ಹಣಕಾಸು ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯದರ್ಶಿಗಳನ್ನು ಅಮಾನತುಗೊಳಿಸಲು ಆಗ್ರಹಿಸಿ ಆಡಳಿತ ಪಕ್ಷ ಎಎಪಿ ಶಾಸಕರು ಸ್ಪೀಕರ್‌ ಮುಂದಿನ ಆವರಣಕ್ಕೆ ಧುಮುಕಿ ಪ್ರತಿಭಟನೆ ನಡೆಸಿದರು.

ಇದರಿಂದಾಗಿ ಸ್ಪೀಕರ್‌ ರಾಮ್ ನಿವಾಸ್ ಗೋಯಲ್ ಕಲಾಪವನ್ನು ಕೆಲ ಕಾಲ ಮುಂದೂಡಿದ್ದರು. ಸಂಜೆ ಮತ್ತೆ ಕಲಾಪ ಸೇರಿದಾಗ ಪ್ರತಿಭಟನೆ ಮುಂದುವರಿಯಿತು. ಇದರಿಂದ ಕಲಾಪವನ್ನು ದಿನದ ಮಟ್ಟಿಗೆ ಸ್ಪೀಕರ್‌ ಮುಂದೂಡಿದರು.

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಆಜ್ಞೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ಸೇರಿ ಅನೇಕ ಅಧಿಕಾರಿಗಳು ವಿವಿಧ ಯೋಜನೆಗಳಿಗೆ ಅಡ್ಡಿಯಾಗಿದ್ದಾರೆ. ಸರ್ಕಾರದ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುವ ಪಿತೂರಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಪಕ್ಷದ ಶಾಸಕರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.