ADVERTISEMENT

ದೆಹಲಿ: ವ್ಯಾಟ್‌ ಕಡಿತ ನಿರಾಕರಿಸಿದ ಆಪ್ ಸರ್ಕಾರ, 400 ಪೆಟ್ರೋಲ್‌ ಬಂಕ್‌ ಬಂದ್‌

ಏಜೆನ್ಸೀಸ್
Published 22 ಅಕ್ಟೋಬರ್ 2018, 4:02 IST
Last Updated 22 ಅಕ್ಟೋಬರ್ 2018, 4:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೆಹಲಿ: ತೈಲದ ಮೇಲೆ ವಿಧಿಸುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕಡಿತಗೊಳಿಸಲು ನಿರಾಕರಿಸಿದಆಪ್‌ ಸರ್ಕಾರದ ವಿರುದ್ಧ ಪೆಟ್ರೋಲ್‌ ಬಂಕ್‌ಗಳು ಹಾಗೂ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ಸಂಸ್ಥೆಗಳು ಪ್ರತಿಭಟನೆಗೆ ಮುಂದಾಗಿವೆ.

ದೆಹಲಿ ಪೆಟ್ರೋಲ್ ಡೀಲರ್ಸ್‌ ಅಸೋಸಿಯೇಷನ್ (ಡಿಪಿಡಿಎ) ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪ್ರತಿಭಟನೆ ನಡೆಸಲಿದೆ.

‘ಉತ್ತರಪ್ರದೇಶ ಹಾಗೂ ಹರಿಯಾಣದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ ವ್ಯಾಟ್‌ ಕಡಿಮೆಗೊಳಿಸಿರುವುದರಿಂದ ದೆಹಲಿಯಲ್ಲಿ ಗ್ರಾಹಕರು ಸಂಖ್ಯೆ ಕಡಿಮೆಯಾಗಿದೆ. ತೈಲ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ’ ಎಂದು ಡಿಪಿಡಿಎ ಅಧ್ಯಕ್ಷ ನಿಶ್ಚಲ್‌ ಸಿಂಘಾನಿಯಾ ಹೇಳಿದ್ದಾರೆ.

ADVERTISEMENT

‘ಸೆ. 4ರಂದು ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಪ್ರತಿ ಲೀಟರ್‌ಗೆ ₹2.50 ದರ ಕಡಿತಗೊಳಿಸಿತು. ಇದಾದ ಬಳಿಕ ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವ್ಯಾಟ್‌ ತೆರಿಗೆ ಕಡಿಮೆ ಮಾಡಿದವು. ಆದರೆ ರಾಜ್ಯ ಸರ್ಕಾರ ತೆರಿಗೆ ಕಡಿತಗೊಳಿಸಲು ನಿರಾಕರಿಸಿದೆ’ ಎಂದು ಸಿಂಘಾನಿಯಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದರದ ವ್ಯತ್ಯಾಸದಿಂದ ತೈಲ ಮಾರಾಟಶೇಕಡ 50–60 ರಷ್ಟು ಕುಸಿದಿದೆ ಎಂದು ಮಾಹಿತಿ ನೀಡಿದರು.

‘ಪೆಟ್ರೋಲ್‌ ಪಂಪ್‌ಗಳನ್ನು ಬಂದ್‌ ಮಾಡುತ್ತಿರುವ ಮಾಲೀಕರಲ್ಲಿ ಬಹುತೇಕರು ಬಿಜೆಪಿಯವರು. ಅವರು ಒತ್ತಾಯಪೂರ್ವಕವಾಗಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.