ADVERTISEMENT

ಪಿಜ್ಜಾ ಡೆಲಿವರಿ ಹುಡುಗನಿಗೆ ಕೊರೊನಾ ಸೋಂಕು: 72 ಕುಟುಂಬಗಳಿಗೆ ಕ್ವಾರಂಟೈನ್‌ 

ಏಜೆನ್ಸೀಸ್
Published 16 ಏಪ್ರಿಲ್ 2020, 6:50 IST
Last Updated 16 ಏಪ್ರಿಲ್ 2020, 6:50 IST
ಪಿಜ್ಜಾ ಡೆಲಿವರಿ ಬಾಯ್‌ – ಸಾಂಕೇತಿಕ ಚಿತ್ರ
ಪಿಜ್ಜಾ ಡೆಲಿವರಿ ಬಾಯ್‌ – ಸಾಂಕೇತಿಕ ಚಿತ್ರ   

ನವದೆಹಲಿ: ಮನೆಮನೆಗೆ ಪಿಜ್ಜಾ ತಲುಪಿಸುವ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದೇ ಪಿಜ್ಜಾ ಡೆಲಿವರಿ ಬಾಯ್‌ನಿಂದ ಆರ್ಡರ್ ಮಾಡಿದ ತಿನಿಸು ಪಡೆದಿರುವ 72 ಕುಟುಂಬಗಳಿಗೆ ಕ್ವಾರಂಟೈನ್ ಆಗುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಸುಮಾರು 20 ದಿನಗಳಿಂದ ಆತನಲ್ಲಿ ಸೋಂಕು ಲಕ್ಷಣಗಳು ಕಂಡು ಬಂದಿರುವುದು ತಿಳಿದು ಬಂದಿದೆ.

ಮಾಳ್ವಿಯಾ ನಗರ ಪ್ರದೇಶದಲ್ಲಿರುವ ಜನಪ್ರಿಯ ಪಿಜ್ಜಾ ಪೂರೈಕೆ ಕೇಂದ್ರದಲ್ಲಿ ಡೆಲಿವರಿ ಬಾಯ್ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ಆತನಿಗೆ ಕೋವಿಡ್-19 ದೃಢಪಟ್ಟಿದೆ. ಕೂಡಲೇ ಪಿಜ್ಜಾ ಕೇಂದ್ರದ ಇತರೆ 16 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ತಿನಿಸು ಡೆಲಿವರಿಯಾಗಿರುವ ದೆಹಲಿಯ ದಕ್ಷಿಣ ಜಿಲ್ಲೆಯ 72 ಕುಟುಂಬಗಳಿಗೆ ಕ್ವಾರಂಟೈನ್ ಆಗುವಂತೆ ಸೂಚಿಸಿದ್ದು, ಅವರ ಆರೋಗ್ಯದ ಮೇಲೆ‌ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಂ.ಮಿಶ್ರಾ ಮಾಹಿತಿ ನೀಡಿದ್ದಾರೆ.

ತಿಂಡಿ-ತಿನಿಸು ಡೆಲಿವರಿ ಮಾಡುವ ಎಲ್ಲರೂ ಮಾಸ್ಕ್ ಧರಿಸುವುದು ಹಾಗೂ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಿತರಾದ ಎಲ್ಲರೂ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಆಗುವುದು ಅನಿವಾರ್ಯವಾಗಿದೆ. ಡೆಲಿವರಿ ಬಾಯ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

ADVERTISEMENT

ಜೊಮ್ಯಾಟೊ ಫುಡ್ ಡೆಲಿವರಿ ಅಪ್ಲಿಕೇಶನ್ ಮೂಲಕವೂ ಪಿಜ್ಜಾ ಕೇಂದ್ರದಿಂದ ಹಲವು ಆರ್ಡರ್‌ಗಳು ಪೂರೈಕೆಯಾಗಿವೆ. 'ಸೋಂಕು ತಗುಲಿರುವ ಡೆಲಿವರಿ ಬಾಯ್ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ಇತರೆ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿಯಾಗಿದೆ. ಆತ ಕೆಲಸ‌ ಮಾಡುತ್ತಿದ್ದ ರೆಸ್ಟೊರೆಂಟ್ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ' ಎಂದು ಜೊಮ್ಯಾಟೊ ಹೇಳಿರುವುದಾಗಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ದೆಹಲಿಯಲ್ಲಿ 1,578 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 30 ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.