ನವದೆಹಲಿ: ಇಲ್ಲಿನ ಶಾಹದರ ಪ್ರದೇಶದಲ್ಲಿ ನಡೆದ ₹43 ಲಕ್ಷ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಪೊಲೀಸರು ಚೀನಾದ ನಾಗರಿಕನೊಬ್ಬನನ್ನು ಬಂಧಿಸಿದ್ದಾರೆ.
‘ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹೆಸರಿನಲ್ಲಿ ವ್ಯವಹಾರದ ಮೂಲಕ ₹100 ಕೋಟಿಗೂ ಅಧಿಕ ಹಗರಣದ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಫ್ದರ್‌ಜಂಗ್ ನಿವಾಸಿ, ಚೀನಾದ ನಾಗರಿಕ ಫಾಂಗ್ ಛೆನ್‌ಜಿನ್ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಉಪ ಪೊಲೀಸ್ ಆಯುಕ್ತ (ಶಾಹದರ) ಪ್ರಶಾಂತ್ ಗೌತಮ್ ತಿಳಿಸಿದರು.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ವಂಚಕ, ಹಲವು ಹಂತಗಳಲ್ಲಿ ₹43.5 ಲಕ್ಷ ಹಣ ಪಡೆದಿದ್ದ. ಹಣ ಮರಳಿ ದೊರೆಯದಿದ್ದ ವೇಳೆ ಸಂತ್ರಸ್ತರು ಸೈಬರ್ ಕ್ರಿಮಿನಲ್ ಪೋರ್ಟಲ್‌ನಲ್ಲಿ ಜುಲೈ ತಿಂಗಳಲ್ಲಿ ದೂರು ದಾಖಲಿಸಿದ್ದರು.
‘ತನಿಖೆ ಆರಂಭಿಸಿದ ಪೊಲೀಸರು ವಂಚಕನ ಬ್ಯಾಂಕ್ ಖಾತೆ, ದೂರವಾಣಿ ಸಂಖ್ಯೆ ಪರಿಶೀಲನೆ ನಡೆಸಿದ ವೇಳೆ ಫಾಂಗ್ ಛೆನ್‌ಜಿನ್ ವಂಚಿಸಿದ್ದು ಕಂಡುಬಂದಿದೆ’ ಎಂದು ಡಿಸಿಪಿ ಗೌತಮ್ ತಿಳಿಸಿದರು.
‘ತೈವಾನ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡಲು 2020ರಲ್ಲಿ ಭಾರತಕ್ಕೆ ಬಂದಿದ್ದ ಈತ, ಈ ಹಿಂದೆ ವಂಚನೆ ನಡೆಸಿ ಬಂಧನಕ್ಕೆ ಒಳಗಾಗಿ ಆಂಧ್ರ ಪ್ರದೇಶದ ತಿರುಪತಿ ಜೈಲಿನಲ್ಲಿ 7 ತಿಂಗಳು ಶಿಕ್ಷೆ ಅನುಭವಿಸಿದ್ದ. ಆ ವೇಳೆಯೇ ಅಲ್ಲಿನ ಪೊಲೀಸರು ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದರು. ದೆಹಲಿ ಪೊಲೀಸರ ಬಂಧನದ ವೇಳೆ ಫಾಂಗ್ ಬಳಿ ಮಾನ್ಯತೆ ಹೊಂದಿದ ವೀಸಾ ಇರಲಿಲ್ಲ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.