ADVERTISEMENT

ಅಂತರರಾಜ್ಯ ಶಸ್ತ್ರಾಸ್ತ್ರ ಪೂರೈಕೆ ಗ್ಯಾಂಗ್‌ನ ಇಬ್ಬರ ಬಂಧನ: 8 ಪಿಸ್ತೂಲ್‌ ವಶ

ಪಿಟಿಐ
Published 25 ಆಗಸ್ಟ್ 2024, 9:30 IST
Last Updated 25 ಆಗಸ್ಟ್ 2024, 9:30 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಅಂತರರಾಜ್ಯ ಶಸ್ತ್ರಾಸ್ತ್ರ ಪೂರೈಕೆ ಗ್ಯಾಂಗ್‌ನ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ADVERTISEMENT

ಆರೋಪಿಗಳು ಮಧ್ಯಪ್ರದೇಶದ ಖಾರ್ಗೋನ್‌ನಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದರು. ಬಳಿಕ ಅವುಗಳನ್ನು ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಸರಬರಾಜು ಮಾಡುತ್ತಿದ್ದರು. ಇವರು ತಮ್ಮ ವ್ಯವಹಾರಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಉತ್ತರ ಪ್ರದೇಶದ ಅರವಿಂದ್ ಕುಮಾರ್ (45) ಮತ್ತು ವಿನೋದ್ ಕುಮಾರ್ (48) ಬಂಧಿತರು. ಆರೋಪಿಗಳಿಂದ ಎಂಟು 0.32 ಬೋರ್ ನಾಡ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 19 ರಂದು ಈ ಇಬ್ಬರು ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಪೂರೈಸಲು ಜೈತ್‌ಪುರದ ಆಗ್ರಾ ಕಾಲುವೆ ರಸ್ತೆಗೆ ತಲುಪಲಿದ್ದಾರೆ ಎಂದು ಪೊಲೀಸರಿಗೆ ಸುಳಿವು ಸಿಕ್ಕಿತ್ತು . ಖಚಿತ ಮಾಹಿತಿ ಮೇರೆಗೆ ತಂಡ ರಚಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ 8 ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಡಿಸಿಪಿ) ‌ಅಮಿತ್ ಕೌಶಿಕ್ ಹೇಳಿದ್ದಾರೆ.

ಆರೋಪಿಗಳು ಮಧ್ಯಪ್ರದೇಶದ ಖಾರ್ಗೋನ್ ಮೂಲದ ಅಕ್ರಮ ಶಸ್ತ್ರಾಸ್ತ್ರ ತಯಾರಕರೊಂದಿಗೆ ಸಂಪರ್ಕ ಹೊಂದಿದ್ದರು. ಕಳೆದ 8 ವರ್ಷಗಳಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಸರಬರಾಜುದಾರರು ಮತ್ತು ಶಸ್ತ್ರಾಸ್ತ್ರ ಖರೀದಿದಾರರನ್ನು ಸಂಪರ್ಕಿಸುತ್ತಿದ್ದರು. ಪ್ರತಿ ಪಿಸ್ತೂಲ್‌ ಅನ್ನು ₹ 12,000 ರಿಂದ 15,000ಕ್ಕೆ ಪಡೆದು ಬಳಿಕ ಅದನ್ನು ₹ 25,000 ರಿಂದ 30,000ಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

ಆರೋಪಿ ಅರವಿಂದ್ ಕುಮಾರ್ ಈ ಹಿಂದೆ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ದಾಖಲಾಗಿದ್ದ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.