ADVERTISEMENT

ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಎಸ್‌ಐಟಿ ರಚಿಸಿದ ದೆಹಲಿ ಪೊಲೀಸರು

ಪಿಟಿಐ
Published 21 ಮೇ 2024, 6:12 IST
Last Updated 21 ಮೇ 2024, 6:12 IST
ಸ್ವಾತಿ ಮಾಲಿವಾಲ್‌
ಸ್ವಾತಿ ಮಾಲಿವಾಲ್‌   

ನವದೆಹಲಿ: ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ತೆರಳಿದ್ದ ವೇಳೆ ಮಾಲಿವಾಲ್ ಮೇಲೆ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಇತ್ತೀಚೆಗೆ ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಉತ್ತರ ದೆಹಲಿಯ ಹೆಚ್ಚುವರಿ ಡಿಸಿಪಿ ಅಂಜಿತಾ ಚೆಪ್ಯಾಲಾ ಅವರು ಎಸ್‌ಐಟಿ ನೇತೃತ್ವವಹಿಸಿದ್ದಾರೆ. ಇನ್‌ಸ್ಪೆಕ್ಟರ್ ಶ್ರೇಣಿಯ ಮೂವರು ಅಧಿಕಾರಿಗಳು, ಬಿಭವ್‌ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿರುವ ಸಿವಿಲ್ ಲೈನ್ ಪೊಲೀಸ್ ಠಾಣೆ ಒಬ್ಬ ಅಧಿಕಾರಿಯೂ ಎಸ್‌ಐಟಿಯಲ್ಲಿದ್ದಾರೆ.

ADVERTISEMENT

ಮೇ 13ರಂದು ಮಾಲಿವಾಲ್ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ದೆಹಲಿ ಸಿಎಂ ಅರವಿಂದ ಕೇಜ್ರವಾಲ್ ಅವರ ಮನೆಯ ಡ್ರಾಯಿಂಗ್ ಕೊಠಡಿಗೆ ಬಿಭವ್ ಕುಮಾರ್ ಅವರನ್ನು ಸೋಮವಾರ ಕರೆದೊಯ್ದಿದ್ದ ದೆಹಲಿ ಪೊಲೀಸರು ಘಟನೆ ಸಂಬಂಧ ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಪೊಲೀಸರು ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಅನುಕ್ರಮವಾಗಿ ಗುರುತಿಸಿ, ಅವುಗಳನ್ನು ಮ್ಯಾಪ್ ಮಾಡಿ ಅಪರಾಧದ ಸ್ಥಳದ ಫೋಟೊಗಳನ್ನು ತೆಗೆದುಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆ ಮತ್ತು ಆರೋಪಿ ಇಬ್ಬರನ್ನೂ ಅಪರಾಧ ಸ್ಥಳಕ್ಕೆ ಕರೆದೊಯ್ದು ಅಪರಾಧ ದೃಶ್ಯವನ್ನು ಮರುಸೃಷ್ಟಿಸಲಾಗಿದೆ. ಸದ್ಯ, ಅದರ ವಿಶ್ಲೇಷಣೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಬಿಭವ್ ಕುಮಾರ್ ಮನೆಗೂ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಿಭವ್ ಕುಮಾರ್ ಮೊಬೈಲ್‌ನಲ್ಲಿ ಅಳಿಸಲಾಗಿರುವ ಮಾಹಿತಿ ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.