ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಜನವರಿ 5, ಭಾನುವಾರ ಸಂಜೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿವಿಯ ವಿದ್ಯಾರ್ಥಿ ಸಂಘದಅಧ್ಯಕ್ಷೆ ಆಯಿಷಿ ಘೋಷ್ ಸೇರಿದಂತೆ ಇತರೆ ಒಂಬತ್ತು ಜನರನ್ನು ಶಂಕಿತರೆಂದು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪರಾಧ ವಿಭಾಗದ ಡಿಸಿಪಿ ಜಾಯ್ ಟಿರ್ಕಿ, ಸರ್ವರ್ ಕೊಠಡಿಯನ್ನು ಧ್ವಂಸ ಮಾಡಿರುವುದರಿಂದಾಗಿ ದುರದೃಷ್ಟವಶಾತ್ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿಲ್ಲ. ಆದರೆ ವೈರಲ್ ಆಗಿದ್ದ ವಿಡಿಯೊಗಳು ಮತ್ತು ಇತರೆ ತನಿಖೆಯಿಂದ ಕೆಲವರನ್ನು ನಾವು ಗುರುತಿಸಿದ್ದೇವೆ. ಪೊಲೀಸರು ಸದ್ಯ ಯಾರನ್ನೂ ಬಂಧಿಸಿಲ್ಲ. ಈಗ ಗುರುತಿಸಲ್ಪಟ್ಟಿರುವವರಿಗೆ ನೋಟಿಸ್ ಜಾರಿ ಮಾಡಿ ಹಿಂಸಾಚಾರ ನಡೆದ ಸ್ಥಳದಲ್ಲಿದ್ದ ಕುರಿತು ಮಾಹಿತಿ ಕೇಳುತ್ತೇವೆ. ಮುಂದುವರಿದ ತನಿಖೆಯ ನಂತರ ಇನ್ನುಳಿದವರ ಹೆಸರುಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗುವುದು ಎಂದಿದ್ದಾರೆ.
ಜನವರಿ 5, ಭಾನುವಾರ ಸಂಜೆ ಜೆಎನ್‌ಯು ವಿಶ್ವವಿದ್ಯಾಲಯಕ್ಕೆ ನುಗ್ಗಿ ಪೆರಿಯಾರ್ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಡೆಸಿದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದರು ಎನ್ನಲಾದ ಶಂಕಿತರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ವೇಳೆ ವಿದ್ಯಾರ್ಥಿಗಳು ಸೇರಿದಂತೆ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದ ಮುಸುಕುಧಾರಿಗಳ ಗುರುತು ಪತ್ತೆಯಾಗಿದೆಯಾ ಇಲ್ಲವಾ ಎನ್ನುವ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.
ದಾಳಿಯ ವೇಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಸೇರಿದಂತೆ ಸುಮಾರು 30 ಜನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಗಾಯಗೊಂಡಿದ್ದರು.
ದೆಹಲಿ ಪೊಲೀಸರು ಜೆಎನ್‌ಎಸ್‌ಯು ಅಧ್ಯಕ್ಷೆ ಆಯಿಷಿ ಘೋಷ್, ಎಂಎ ಕೊರಿಯನ್ ವಿದ್ಯಾರ್ಥಿ ವಿಕಾಸ್ ಪಟೇಲ್, ಸಮಾಜ ಶಾಸ್ತ್ರ ಶಾಲೆಯ ಪಂಕಜ್ ಮಿಶ್ರಾ, ಜೆಎನ್‌ಯು ಮಾಜಿ ವಿದ್ಯಾರ್ಥಿ ಚುಂಚುನ್ ಕುಮಾರ್, ಸಂಸ್ಕೃತ ಪಿ.ಎಚ್‌ಡಿ ವಿದ್ಯಾರ್ಥಿಯೋಗೇಂದ್ರ ಭಾರಧ್ವಜ್, ಸಮಾಜ ಶಾಸ್ತ್ರದ ದೋಲನ್ ಸಮನತ ಮತ್ತು ಸುಚೇತ ತಲುಕ್ಡರ್, ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಪ್ರಿಯಾ ರಂಜನ್ ಎಂಬುವರನ್ನು ಶಂಕಿತರೆಂದು ಗುರುತಿಸಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ ಶಂಕಿತರೆಂದು ಗುರುತಿಸಲಾದವರಲ್ಲಿ ಬಹುತೇಕರು ಎಡಪಂಥೀಯ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ.
ದೆಹಲಿ ಪೊಲೀಸ್ ಪಿಆರ್‌ಒ ರಾಂಧವ ಮಾತನಾಡಿ, ಜೆಎನ್‌ಯುವಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಯನ್ನು ಅಫರಾಧ ವಿಭಾಗ ಕೈಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತಿಹೆಚ್ಚು ಸುಳ್ಳುಸುದ್ದಿಯು ಹಬ್ಬಿರುವುದನ್ನು ಗಮನಿಸಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.