ADVERTISEMENT

ಖಾಲಿದ್‌ ಜಾಮೀನು ಅರ್ಜಿ: ಪೊಲೀಸರ ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್‌

ಪಿಟಿಐ
Published 18 ಮೇ 2023, 14:17 IST
Last Updated 18 ಮೇ 2023, 14:17 IST
ಉಮರ್‌ ಖಾಲಿದ್‌
ಉಮರ್‌ ಖಾಲಿದ್‌   

ನವದೆಹಲಿ: 2020ರ ಫೆಬ್ರುವರಿಯಲ್ಲಿ ನಡೆದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಸಲ್ಲಿಸಿರುವ ಜಾಮೀನು ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್‌, ದೆಹಲಿ ಪೊಲೀಸರ ಅಭಿಪ್ರಾಯ ಕೇಳಿದೆ.

ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ(ಯುಎಪಿಎ) ಖಾಲಿದ್‌ ಅವರನ್ನು ಬಂಧಿಸಲಾಗಿದ್ದು, ಎರಡು ವರ್ಷಗಳಿಂದಲೂ ಆತ ಜೈಲಿನಲ್ಲಿದ್ದಾರೆ. 

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ಹಿಮಾ ಖುರೇಷಿ ಅವರಿದ್ದ ವಿಭಾಗೀಯ ಪೀಠವು, ಆರು ವಾರದೊಳಗೆ ಅಭಿಪ್ರಾಯ ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ನೋಟಿಸ್‌ ನೀಡಿತು. 

ADVERTISEMENT

ಖಾಲಿದ್‌ ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್, ‘ಗಲಭೆ ನಡೆದ ದಿನದಂದು ಖಾಲಿದ್‌ ಸ್ಥಳದಲ್ಲಿ ಇರಲಿಲ್ಲ’ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಈಗ ಪೊಲೀಸರ ಅಭಿಪ್ರಾಯ ಕೇಳಿ ನೋಟಿಸ್‌ ನೀಡಲಾಗಿದೆ. ರಜೆ ಕಾಲದ ಪೀಠದ ಮುಂದೆಯೂ ಈ ಅರ್ಜಿಯ ವಿಚಾರಣೆಗೆ ಅವಕಾಶ ನೀಡಲಾಗುವುದು’ ಎಂದು ಹೇಳಿತು. 

ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್‌, ‘ನ್ಯಾಯಾಲಯದ ಬೇಸಿಗೆ ರಜೆ ಅವಧಿಯು ಪೂರ್ಣಗೊಂಡ ಬಳಿಕವೇ ವಿಚಾರಣೆ ಕೈಗೆತ್ತಿಕೊಳ್ಳಬೇಕು’ ಎಂದು ಕೋರಿದರು.

ಪೀಠವು ಮೇ 22ರಿಂದ ಜುಲೈ 2ರ ವರೆಗೆ ಸುಪ್ರೀಂ ಕೋರ್ಟ್‌ಗೆ ರಜೆಯಿದ್ದು, ಆ ಬಳಿಕ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿ ಮುಂದೂಡಿತು. 

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು. ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದು, 700 ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಖಾಲಿದ್, ಶಾರ್ಜೀಲ್‌ ಇಮಾಮ್‌ ಸೇರಿದಂತೆ ಹಲವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.  

ಕಳೆದ ವರ್ಷದ ಅಕ್ಟೋಬರ್‌ 18ರಂದು ಖಾಲಿದ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.