ನವದೆಹಲಿ: ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ನೆರವಾಗಲು ದೆಹಲಿ ಪೊಲೀಸರ ವಿಶೇಷ ತಂಡ ಮುಂಬೈಗೆ ಆಗಮಿಸಲಿದೆ ಎಂದು ಪೊಲೀಸ್ ಮೂಲಗಳು ಭಾನುವಾರ ತಿಳಿಸಿವೆ.
ನಾಲ್ವರು ಪೊಲೀಸರನ್ನೊಳಗೊಂಡ ವಿಶೇಷ ತಂಡ ಮುಂಬೈ ಪೊಲೀಸರ ಜತೆಗೂಡಿ ಸಿದ್ಧಿಕಿ ಹತ್ಯೆ ಪ್ರಕರಣವನ್ನು ಭೇದಿಸಲಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು. ಒಪ್ಪಂದದ ಹತ್ಯೆ, ವ್ಯಾಪಾರದ ಪೈಪೋಟಿ, ಕೊಳೆಗೇರಿ ಪುನರ್ವಸತಿ ಯೋಜನೆ ಸಂಬಂಧ ಬೆದರಿಕೆ ಹೀಗೆ ಎಲ್ಲಾ ಆಯಾಮಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಲಾಗವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮೂರನೇ ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಹರಿಯಾಣದ ಗುರ್ಮೈಲ್ ಸಿಂಗ್ ಮತ್ತು ಉತ್ತರ ಪ್ರದೇಶ ಧರ್ಮರಾಜ್ ಕಶ್ಯಪ್ ಬಂಧಿತರು ಎಂದು ತಿಳಿಸಲಾಗಿದೆ.
ದಸರಾ ಪ್ರಯುಕ್ತ ಬಾಬಾ ಸಿದ್ಧಿಕಿ ಅವರು ತಮ್ಮ ಮಗ ಹಾಗೂ ಶಾಸಕ ಜಿಶಾನ್ ಸಿದ್ಧಿಕಿ ಅವರ ಮನೆಗೆ ತೆರಳಿದ್ದರು. ಮನೆಯಿಂದ ಹೊರಗೆ ಬರುವಾಗ ಶನಿವಾರ ರಾತ್ರಿ 9.30 ರ ಸುಮಾರು ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಬಾಬಾ ಅವರ ಮೇಲೆ ಪಿಸ್ತೂಲ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ್ದರು. ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿದ್ದ ಬಾಬಾ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಭಾನುವಾರ ತಡರಾತ್ರಿ 12.30ಕ್ಕೆ ಮೃತರಾದರು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.