ADVERTISEMENT

ದೆಹಲಿ: ನೀರಿನ ಅಭಾವ– ಬಿಜೆಪಿ ಪ್ರತಿಭಟನೆ

ಜಲಫಿರಂಗಿ ಬಳಸಿ ಪ್ರತಿಭಟನಕಾರರ ಚದುರಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 16:15 IST
Last Updated 22 ಜೂನ್ 2024, 16:15 IST
<div class="paragraphs"><p>ನೀರಿನ ಬಿಕ್ಕಟ್ಟು ವಿಚಾರ ಸಂಬಂಧ ಹಳೆಯ ದೆಹಲಿಯ ತುರ್ಕಮಾನ್ ಗೇಟ್ ಬಳಿ ಶನಿವಾರ ಎಎಪಿ ಬೆಂಬಲಿಗರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ </p></div>

ನೀರಿನ ಬಿಕ್ಕಟ್ಟು ವಿಚಾರ ಸಂಬಂಧ ಹಳೆಯ ದೆಹಲಿಯ ತುರ್ಕಮಾನ್ ಗೇಟ್ ಬಳಿ ಶನಿವಾರ ಎಎಪಿ ಬೆಂಬಲಿಗರು ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ

   

ನವದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಎಎಪಿ ಸರ್ಕಾರ ವಿಫಲವಾಗಿದೆ ಎಂದು ದೂರಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಪೊಲೀಸರು ಜಲಫಿರಂಗಿಯನ್ನು ಬಳಸಿ, ಪ್ರತಿಭಟನಕಾರರನ್ನು ಚದುರಿಸಿದರು. 

ADVERTISEMENT

ದೆಹಲಿ ಜಲ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಎಎಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ನಿರಾಕರಿಸಿದ್ದರಿಂದಾಗಿ ಪ್ರತಿಭಟನಕಾರರ ಮೇಲೆ ಜಲಫಿರಂಗಿ ಬಳಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರತಿಭಟನೆ ನೇತೃತ್ವದ ವಹಿಸಿದ್ದ ಬಿಜೆಪಿ ಮುಖಂಡ ರಮೇಶ್ ಬಿಧೂಡಿ, ‘ಈ ಮೊದಲು ₹600 ಕೋಟಿ ಲಾಭ ಗಳಿಸುತ್ತಿದ್ದ ದೆಹಲಿ ಜಲಮಂಡಳಿಯು ಭ್ರಷ್ಟಾಚಾರದ ಕಾರಣದಿಂದ ₹60 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದೆ’ ಎಂದು ದೂರಿದರು. 

ಆ ಬಳಿಕ ತುಘಲಕಾಬಾದ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಿನ ಅಭಾವವಿದೆ ಎಂಬ ಮನವಿಯನ್ನು ದೆಹಲಿ ಜಲ ಮಂಡಳಿಯ ಎಂಜಿನಿಯರ್‌ಗೆ ಸಲ್ಲಿಸಿದರು.

2ನೇ ದಿನಕ್ಕೆ ಕಾಲಿಟ್ಟ ಸಚಿವೆ ಆತಿಶಿ ನಿರಶನ 

ನವದೆಹಲಿ (ಪಿಟಿಐ): ಹರಿಯಾಣದಿಂದ ಹೆಚ್ಚಿನ ಪ್ರಮಾಣದ ನೀರು ದೆಹಲಿಗೆ ಹರಿಸಬೇಕು ಎಂದು ಒತ್ತಾಯಿಸಿ ಸಚಿವೆ ಆತಿಶಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಶನಿವಾರ 2ನೇ ದಿನಕ್ಕೆ ಕಾಲಿಟ್ಟಿದೆ.  ‘ಜಲ ಸತ್ಯಾಗ್ರಹ’ ಹಮ್ಮಿಕೊಂಡ ದಕ್ಷಿಣ ದೆಹಲಿಯ ಭೋಗಲ್‌ನಿಂದ ವಿಡಿಯೊ ಸಂದೇಶ ರವಾನಿಸಿರುವ ಸಚಿವೆ ಆತಿಶಿ ‘ಹರಿಯಾಣದಿಂದ ಹೆಚ್ಚುವರಿ ನೀರು ಬಿಡುಗಡೆಯಾಗುವವರೆಗೆ ಏನನ್ನೂ ಸೇವಿಸುವುದಿಲ್ಲ. ಹರಿಯಾಣ ನೀರು ಬಿಡದ ಕಾರಣ 28 ಲಕ್ಷ ಜನರಿಗೆ ತೊಂದರೆಯಾಗಿದೆ’ ಎಂದು ಹೇಳಿದ್ದಾರೆ. 

ಲೆಫ್ಟಿನೆಂಟ್ ಗವರ್ನರ್ ಬೇಸರ

ನವದೆಹಲಿ (ಪಿಟಿಐ): ನಗರದಲ್ಲಿನ ಎದುರಾಗಿರುವ ನೀರಿನ ಬಿಕ್ಕಟ್ಟಿಗೆ ದೆಹಲಿ ಸರ್ಕಾರದ ಕಾರ್ಯವೈಖರಿಯೇ ಕಾರಣ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಶನಿವಾರ ತಿಳಿಸಿದ್ದಾರೆ.  ನೀರಿನ ಸಮಸ್ಯೆಗೆ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಲಿಲ್ಲ. ಕಳೆದ ಕೆಲವು ವಾರಗಳಿಂದ ವಿವಿಧ ಹಂತಗಳಲ್ಲಿ ದೆಹಲಿಯ ಸಚಿವರ ‘ಉತ್ಸಾಹದ ಭಾಷಣ’ವು ದುಃಖಕರ ಮತ್ತು ಪ್ರಶ್ನಾರ್ಹವಾಗಿದೆ. ದೆಹಲಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ತಮ್ಮ ರಾಜಕೀಯ ಲಾಭಕ್ಕಾಗಿ ನೆರೆಯ ರಾಜ್ಯಗಳನ್ನು ಟೀಕಿಸುವ ಅವಕಾಶವಾಗಿಸಿಕೊಂಡರು. ಇದು ದೆಹಲಿ ಜನರನ್ನು ಸಮಸ್ಯೆಗೆ ಸಿಲುಕಿಸಿಕೊಂಡರು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.