ADVERTISEMENT

Delhi pollution | ವರ್ಕ್‌ ಫ್ರಮ್ ಹೋಂ, ಸರಿ–ಬೆಸ ನಿಯಮ ಶೀಘ್ರದಲ್ಲೇ ಜಾರಿ: ಸಚಿವ

ಪಿಟಿಐ
Published 19 ನವೆಂಬರ್ 2024, 10:17 IST
Last Updated 19 ನವೆಂಬರ್ 2024, 10:17 IST
   

ನವದೆಹಲಿ: ದೆಹಲಿಯ ವಾಯು ಗುಣಮಟ್ಟ ಮಂಗಳವಾರ ಮತ್ತಷ್ಟು ಹದಗೆಟ್ಟಿದೆ. ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 484ರಷ್ಟಿದ್ದು, ‘ತೀವ್ರ ಅಪಾಯ’ದ ಹಂತ ತಲುಪಿದೆ. ಪರಿಸ್ಥಿತಿಯನ್ನು ನಿಭಾಯಿಸಲು ವರ್ಕ್‌ ಫ್ರಮ್ ಹೋಂ (ಮನೆಯಿಂದಲೇ ಕೆಲಸ) ಹಾಗೂ ಸರಿ–ಬೆಸ ನಿಯಮವನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

ಪಿಟಿಐ ಜತೆ ಮಾತನಾಡಿದ ಅವರು, 'ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿದೆ. ಇದರಿಂದ ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ. ಈ ಪರಿಸ್ಥಿತಿಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ' ಎಂದು ಹೇಳಿದ್ದಾರೆ.

ನಗರದಲ್ಲಿ ‘ಜಿಆರ್‌ಎಪಿ –3’ (ಗ್ರೇಡೆಡ್‌ ರೆಸ್ಪಾನ್ಸ್‌ ಆ್ಯಕ್ಷನ್‌ ಪ್ಲ್ಯಾನ್‌–3) ನಿಯಮವನ್ನು ಜಾರಿ ಮಾಡಲಾಗಿದೆ. ಇದರ ಅಡಿಯಲ್ಲಿ ಅನೇಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಕ್ರಮಗಳ ಪರಿಣಾಮವನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಸಕಾರಾತ್ಮಕ ಫಲಿತಾಂಶ ಬಂದರೆ ಅದಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ಪ್ರಸ್ತುತ ಪರಿಸ್ಥಿತಿಯನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಕರೆದ ರೈ, ಸಾಮೂಹಿಕ ಕ್ರಮದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇದು ವೈದ್ಯಕೀಯ ತುರ್ತುಸ್ಥಿತಿಯ ಸಮಯ. ಪರಿಸ್ಥಿತಿಯನ್ನು ಪರಿಹರಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.