ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದ ಎದುರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದ ಆರೋಪದ ಮೇಲೆ ಗುಂಪೊಂದರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಸೌತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೂರ್ನಾಲ್ಕು ಕಾರುಗಳಲ್ಲಿ ಬಂದ ಸುಮಾರು 20 ಮಂದಿ ಕೇಂದ್ರ ಸಚಿವರ ನಿವಾಸದ ಹೊರಗೆ ಜಮಾಯಿಸಿದ್ದರು. ಪ್ರತಿಭಟನಾಕಾರರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಕರಪತ್ರಗಳನ್ನು ಹಿಡಿದುಕೊಂಡಿದ್ದರು. ಕೆಲವು ಮಾಧ್ಯಮ ಪ್ರತಿನಿಧಿಗಳು ಸಹ ಸ್ಥಳದಲ್ಲಿ ಹಾಜರಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಗುಂಪು ಸೇರುವಂತಿಲ್ಲ ಎಂದು ಪೊಲೀಸರು ಪ್ರತಿಭಟನಾಕಾರರಿಗೆ ತಿಳಿಸಿದ್ದರು. ಆದರೂ ಪ್ರತಿಭಟನೆ ನಿಲ್ಲಿಸದೆ, ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಅಲ್ಲದೆ, ಆಕ್ರೋಶಗೊಂಡ ಪ್ರತಿಭಟನಾಕಾರರು ಕೇಂದ್ರ ಸಚಿವರ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಪೊಲೀಸ್ ಠಾಣೆಯಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ, ಪ್ರತಿಭಟನಾಕಾರರನ್ನು ಚದುರಿಸಲಾಯಿತು. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.