ನವದೆಹಲಿ: ಭಾರಿ ಮಳೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಲವು ಸ್ಥಳಗಳು ಜಲಾವೃತಗೊಂಡಿವೆ. ಕೆಲವಡೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಸಂಚಾರ ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಉನ್ನತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿರುವ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ರಜೆಯಲ್ಲಿರುವ ಎಲ್ಲ ಉನ್ನತ ಅಧಿಕಾರಿಗಳು ಕೂಡಲೇ ಕರ್ತವ್ಯಕ್ಕೆ ಮರಳಬೇಕು. ಮುಂದಿನ ಎರಡು ತಿಂಗಳವರೆಗೆ ಅಧಿಕಾರಿಗಳಿಗೆ ರಜೆ ನೀಡಬಾರದು. 24 ಗಂಟೆ ಕಾರ್ಯಾಚರಿಸುವ ತುರ್ತು ನಿಯಂತ್ರಣ ಕೊಠಡಿಗಳನ್ನು ತೆರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಕ್ಸೇನಾ ಅವರ ಕಚೇರಿ ಮೂಲಗಳು ತಿಳಿಸಿವೆ.
ದೆಹಲಿ ಜಲ ಮಂಡಳಿ, ಲೋಕೋಪಯೋಗಿ ಇಲಾಖೆ, ನಗರ ಪಾಲಿಕೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ನೀರಾವರಿ ಇಲಾಖೆ, ಪ್ರವಾಹ ನಿಯಂತ್ರಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಗೆ ಹಾಜರಾಗಿದ್ದರು.
ನೆರೆಯ ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಮಳೆ ಪ್ರಮಾಣ ಹಾಗೂ ಹತ್ನಿಕುಂಡ್ ಅಣೆಕಟ್ಟೆಯ ಹೊರ ಹರಿವಿನ ಪ್ರಮಾಣವನ್ನು ಅವಲೋಕಿಸಬೇಕು ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದೆಹಲಿ ಪ್ರವಾಹ ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ನೆರವಿನೊಂದಿಗೆ ವಿಪತ್ತು ಪರಿಹಾರ ಘಟಕ ತೆರೆಯುವಂತೆ ಕಂದಾಯ ಇಲಾಖೆಗೆ ತಿಳಿಸಿರುವ ಸಕ್ಸೇನಾ, ಅಗತ್ಯಬಿದ್ದರೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್‌ಡಿಆರ್‌ಎಫ್) ಸಹಕಾರ ಪಡೆಯುವಂತೆಯೂ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.