ನವದೆಹಲಿ: ದೇಶದ ರಾಜಧಾನಿ ಮೈಕೊರೆವ ಚಳಿಯಿಂದ ತತ್ತರಿಸುತ್ತಿದೆ. ಸೋಮವಾರ ಬೆಳಗಿನ ಜಾವ ದೆಹಲಿಯಲ್ಲಿ 1.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಎಎನ್‌ಐ ಟ್ವೀಟಿಸಿದೆ.
ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ದೆಹಲಿಯಲ್ಲಿ ಮುಂದಿನ ಆರು ದಿನ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ವರ್ಷದ ಚಳಿಗಾಲದಲ್ಲಿ ದೆಹಲಿಯ ತಾಪಮಾನವು ವಾಡಿಕೆಗಿಂತ 2–3 ಡಿಗ್ರಿಯಷ್ಟು ಹೆಚ್ಚು ಕುಸಿದಿದ್ದು, ದಟ್ಟ ಮಂಜು ಆವರಿಸಿದೆ.
ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಬುಧವಾರದವರೆಗೆ ತೀವ್ರ ಶೀತ ಗಾಳಿಯು ಮುಂದುವರಿಯಲಿದೆ ಎಂದು ಹಮಾವಾನ ಇಲಾಖೆ ಹೇಳಿದೆ. ಬುಧವಾರದ ಹೊತ್ತಿಗೆ ಕನಿಷ್ಠ ತಾಪಮಾನ 4ಕ್ಕೆ ಏರುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.
ದಟ್ಟ ಮಂಜು ಆವರಿಸಿದ್ದರಿಂದ ಸೋಮವಾರ ಬೆಳಿಗ್ಗೆ ಉತ್ತರ ರೈಲ್ವೆ ವಲಯದ 13 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ತೀವ್ರ ಚಳಿ ನಡುವೆಯೂ ದೆಹಲಿ ಕರ್ತವ್ಯ ಪಥದಲ್ಲಿ ಗಣರಾಜೋತ್ಸವ ಪರೇಡ್‌ಗೆ ತಾಲೀಮು ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.