ADVERTISEMENT

ಸಿಎಎ ವಿರುದ್ಧ ಪ್ರತಿಭಟನೆ: ದೆಹಲಿ ಗಲಭೆ ಪೂರ್ವ ನಿಯೋಜಿತ ಕೃತ್ಯವೆಂದ ಹೈಕೋರ್ಟ್‌

ಐಎಎನ್ಎಸ್
Published 29 ಸೆಪ್ಟೆಂಬರ್ 2021, 9:15 IST
Last Updated 29 ಸೆಪ್ಟೆಂಬರ್ 2021, 9:15 IST
ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಫೆ.26, 2020ರಂದು ಶಿವ್‌ ವಿಹಾರ್‌ ಪ್ರದೇಶದಲ್ಲಿ ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಹಚ್ಚಿರುವುದು. ಪಿಟಿಐ ಚಿತ್ರ
ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಫೆ.26, 2020ರಂದು ಶಿವ್‌ ವಿಹಾರ್‌ ಪ್ರದೇಶದಲ್ಲಿ ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಹಚ್ಚಿರುವುದು. ಪಿಟಿಐ ಚಿತ್ರ   

ನವದೆಹಲಿ: ಕಳೆದ ವರ್ಷ ಸಂಭವಿಸಿದ ದೆಹಲಿ ಗಲಭೆಯು ಆ ಕ್ಷಣದ ಪ್ರಚೋದನೆಯಿಂದ ಘಟಿಸಿದ್ದಲ್ಲ, ಪೂರ್ವ ನಿಯೋಜಿತ ಕೃತ್ಯ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಮೊಹಮ್ಮದ್‌ ಇಬ್ರಾಹಿಂಗೆ ದೆಹಲಿ ಹೈಕೋರ್ಟ್‌ ಸೋಮವಾರ ಜಾಮೀನು ನಿರಾಕರಿಸಿತು. ಈ ವೇಳೆ, ಫೆಬ್ರುವರಿ 2020ರ ದೆಹಲಿ ಗಲಭೆಯು ಒಳಸಂಚಿನಿಂದ ಯೋಜನೆ ರೂಪಿಸಿ ನಡೆಸಿದ ಕೃತ್ಯವಾಗಿದೆ. ಆ ಕ್ಷಣದ ಪ್ರಚೋದನೆಯಿಂದ ಕಿಡಿ ಹೊತ್ತಿಕೊಂಡಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ.

ಮೂರು ದಿನಗಳ ಕಾಲ ನಡೆದ ಗಲಭೆಯಲ್ಲಿ ಕನಿಷ್ಠ 50 ಮಂದಿ ಮೃತರಾಗಿದ್ದು, ಸುಮಾರು 200 ಮಂದಿ ಗಾಯಗೊಂಡಿದ್ದರು.

ADVERTISEMENT

ವಿಡಿಯೊಗಳಲ್ಲಿ ಪ್ರತಿಭಟನಾಕಾರರ ನಡವಳಿಕೆಯು ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸುವುದಕ್ಕಾಗಿ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥಿತ ಸಂಪರ್ಕ ಕಡಿತ ಮತ್ತು ಹಾಳು ಮಾಡಿರುವುದು ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪೂರ್ವ ಯೋಜಿತ ಪಿತೂರಿ ಎಂಬುದನ್ನು ದೃಢಪಡಿಸುತ್ತದೆ. ಅಸಂಖ್ಯಾತ ಗಲಭೆಕೋರರು ನಿರ್ದಯವಾಗಿ ದೊಣ್ಣೆ, ಕೋಲು, ಬ್ಯಾಟ್ ಇತ್ಯಾದಿಗಳೊಂದಿಗೆ ಅಧಿಕ ಸಂಖ್ಯೆಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬುದರಿಂದಲೂ ಇದು ಸ್ಪಷ್ಟವಾಗಿದೆ ಎಂದು ನ್ಯಾಯಮೂರ್ತಿ ಸುಬ್ರಮಣಿಯಮ್‌ ಪ್ರಸಾದ್‌ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಮೊಹಮ್ಮದ್‌ ಇಬ್ರಾಹಿಂನನ್ನು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಮೊಹಮ್ಮದ್‌ ಸಲೀಮ್‌ ಖಾನ್‌ ಜಾಮೀನು ಪಡೆದು ಬಿಡುಗಡೆ ಹೊಂದಿದ್ದಾರೆ.

'ವ್ಯಕ್ತಿಗತ ಸ್ವಾತಂತ್ರ್ಯ'ವನ್ನು ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಲು ಬಳಸಬಾರದು ಎಂದು ಆರೋಪಿ ಇಬ್ರಾಹಿಂ ಖಡ್ಗ ಹಿಡಿದು ಬೆದರಿಕೆ ಒಡ್ಡುತ್ತಿರುವ ಸಿಸಿಟಿವಿ ತುಣುಕನ್ನು ಉದ್ದೇಶಿಸಿ ನ್ಯಾ. ಸುಬ್ರಮಣಿಯನ್‌ ಪ್ರಸಾದ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಫೆಬ್ರವರಿ 24ರಂದು, ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗುಂಪೊಂದು ಹೆಡ್ ಕಾನ್‌ಸ್ಟೇಬಲ್‌ ರತನ್‌ ಲಾಲ್‌ ಅವರ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭ ಲಾಲ್‌ ಮೃತಪಟ್ಟಿದ್ದರು. ಲಾಲ್‌ ಅವರ ಹತ್ಯೆ ಪ್ರಕರಣದಲ್ಲಿ ಇಬ್ರಾಹಿಂನನ್ನು ಬಂಧಿಸಲಾಗಿದೆ. ಲಾಲ್‌ ಅವರ ಸಾವು ಖಡ್ಗದಿಂದ ಇರಿತಕ್ಕೆ ಒಳಗಾಗಿ ಸಂಭವಿಸಿಲ್ಲ ಎಂದು ಇಬ್ರಾಹಿಂ ಪರ ವಕೀಲರು ವಾದಿಸಿದ್ದರು. ಖಡ್ಗವನ್ನು ಜೊತೆಯಲ್ಲಿ ಇಟ್ಟುಕೊಂಡು ಓಡಾಡಿದ್ದು ಸ್ವಯಂ ರಕ್ಷಣೆ ಮತ್ತು ಕುಟುಂಬದ ರಕ್ಷಣೆಗೆ ಎಂದು ಕೋರ್ಟ್‌ನಲ್ಲಿ ಸಬೂಬು ನೀಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.