ADVERTISEMENT

ಬಿಸಿಗಾಳಿಗೆ ದೆಹಲಿ ತತ್ತರ: 22 ಮಂದಿ ಸಾವು

ಪಿಟಿಐ
Published 20 ಜೂನ್ 2024, 10:00 IST
Last Updated 20 ಜೂನ್ 2024, 10:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಹಲವು ದಿನಗಳಿಂದ ಬಿಸಿಗಾಳಿಯ ತೀವ್ರತೆಗೆ ತತ್ತರಿಸಿರುವ ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ ಸಾಧಾರಣ ಮಳೆಯಾಗಿ, ವಾತಾವರಣ ಕೊಂಚ ತಂ‍ಪಾಗಿದೆ. ಹಾಗಿದ್ದರೂ, ಬಿಸಿಲಾಘಾತ ಸೇರಿದಂತೆ ತಾಪಮಾನಕ್ಕೆ ಸಂಬಂಧಿಸಿದ ಆನಾರೋಗ್ಯದ ಕಾರಣದಿಂದ 24 ಗಂಟೆಗಳಲ್ಲಿ ರಾಮ್ ಮನೋಹರ್ ಲೋಹಿಯಾ( ಆರ್‌ಎಂಎಲ್), ಲೋಕ ನಾಯಕ ಜೈ ಪ್ರಕಾಶ್‌ (ಎಲ್‌ಎನ್‌ಜೆಪಿ) ಮತ್ತು ಸಫ್ದರ್‌ಜಂಗ್‌ ಆಸ್ಪತ್ರೆಗಳಲ್ಲಿ ಒಟ್ಟು 22 ಮಂದಿ ಮೃತಪಟ್ಟಿದ್ದಾರೆ. 

ಎರಡು ದಿನಗಳಿಂದ ‌ದೇಶದ ರಾಜಧಾನಿಯ ಆಸ್ಪತ್ರೆಗಳಲ್ಲಿ ಬಿಸಿಲಾಘಾತದಿಂದಾಗಿ ಮೃತಪಡುತ್ತಿರುವವರ ಸಂಖ್ಯೆ ಮತ್ತು ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 

ADVERTISEMENT

ಸಫ್ದರ್‌ಜಂಗ್‌ ಆಸ್ಪತ್ರೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಉಷ್ಣತೆಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವ 33 ಮಂದಿ ದಾಖಲಾಗಿದ್ದು, 24 ಗಂಟೆಗಳಲ್ಲಿ 13 ಮಂದಿ ಕೊನೆಯುಸಿರೆಳೆದಿದ್ದಾರೆ. 

‘ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಗೆ 24 ಗಂಟೆಗಳಲ್ಲಿ 22 ಮಂದಿ ದಾಖಲಾಗಿದ್ದು, ಈ ಪೈಕಿ ನಾಲ್ವರು ಕೊನೆಯುಸಿರೆಳೆದಿದ್ದಾರೆ. 13 ಮಂದಿ ವಂಟಿಲೇಟರ್‌ನಲ್ಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. 

ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 17 ಮಂದಿ ದಾಖಲಾಗಿದ್ದು, ಐವರು ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ .

'ಮೃತಪಟ್ಟವರು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ. ಅಂತಹ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರ ದೇಹದ ಉಷ್ಣತೆಯನ್ನು ಪರೀಕ್ಷಿಸಲಾಗುತ್ತದೆ. ಅದು 105 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಜಾಸ್ತಿ ಬಂದರೆ, ಅವರನ್ನು ಬಿಸಿಲಾಘಾತದಿಂದ ಅಸ್ವಸ್ಥಗೊಂಡವರು ಎಂದು ಪರಿಗಣಿಸಲಾಗುತ್ತದೆ’ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 


ದೆಹಲಿಯ ಸರ್‌ ಗಂಗಾ ರಾಮ್‌ ಆಸ್ಪತ್ರೆಯ ಹೊರ ರೋಗಿ ವಿಭಾಗಕ್ಕೆ ಪ್ರತಿ ದಿನ ಬಿಸಿಲಾಘಾತಕ್ಕೆ ಒಳಗಾಗಿರುವ 30ರಿಂದ 35 ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ.


50 ಶವಗಳು ಪತ್ತೆ:

ಈ ಮಧ್ಯೆ, ಎರಡು ದಿನಗಳ ಅವಧಿಯಲ್ಲಿ ದೆಹಲಿಯ ವಿವಿಧ ಕಡೆಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ 50 ಮಂದಿಯ ಶವಗಳು ಪತ್ತೆಯಾಗಿವೆ.‌ ಆದರೆ, ಇವರೆಲ್ಲರೂ ಬಿಸಿಗಾಳಿಯ ಕಾರಣದಿಂದ ಮೃತಪಟ್ಟಿದ್ದಾರೆಯೇ ಎಂಬುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದೃಢಪಡಿಸಿಲ್ಲ. 

ಭದ್ರತಾ ಕಾವಲುಗಾರರು, ಭಿಕ್ಷುಕರು ಮತ್ತು ಆರ್ಥಿಕವಾಗಿ ಹಿಂದುಳಿದವರು ಅಸಹಜವಾಗಿ ಮೃತಪಟ್ಟಿರುವ ಬಗ್ಗೆ ನಮಗೆ ಕರೆಗಳು ಬರುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. 

‘ದೆಹಲಿಯ ಎಲ್ಲ ಜಿಲ್ಲೆಗಳಿಂದಲೂ ನಮಗೆ ಕರೆಗಳು ಬರುತ್ತಿವೆ. ಆದರೆ, ಜನರ ಸಾವಿಗೆ ಏನು ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಿಂದಷ್ಟೇ ತಿಳಿದುಬರಲಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಇಲ್ಲಿಯವರೆಗೆ ವಿವಿಧ ಕಡೆಗಳಲ್ಲಿ 50 ಜನರು ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಈ ಸಂಬಂಧ ನಾವು ತನಿಖೆಯನ್ನೂ ಆರಂಭಿಸಿದ್ದೇವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದೇವೆ. ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಅವರು ತಿಳಿಸಿದರು. 

‘ಜೂನ್‌ 11ರಿಂದ 19ರ ನಡುವೆ ಬಿಸಿಗಾಳಿಯ ಕಾರಣಕ್ಕೆ ವಸತಿರಹಿತ 192 ಮಂದಿ ಮೃತಪಟ್ಟಿದ್ದಾರೆ’ ಎಂದು ವಸತಿರಹಿತರ ಪರವಾಗಿ ಕೆಲಸ ಮಾಡುವ ‘ದಿ ಸೆಂಟೆರ್‌ ಫಾರ್‌ ಹೋಲಿಸ್ಟಿಕ್‌ ಡೆವೆಲಪ್‌ಮೆಂಟ್‌’ ಎಂಬ ಸ್ವಯಂ ಸೇವಾ ಸಂಸ್ಥೆ ಹೇಳಿಕೊಂಡಿದೆ.

ಸಾಧಾರಣ ಮಳೆ: ಜನ ಕೊಂಚ ನಿರಾಳ

ಹಲವು ದಿನಗಳ ಬಿಸಿಗಾಳಿಯ ನಂತರ ದೆಹಲಿಯ ವಿವಿಧ ಭಾಗಗಳಲ್ಲಿ ಗುರುವಾರ ಬೆಳಿಗ್ಗೆ ಸಾಧಾರಣ ಮಳೆಯಾಗಿದೆ. ಇದರಿಂದ ವಾತಾವರಣ ಕೊಂಚ ತಂಪಾಗಿದ್ದು ಜನರು‌ ಕೊಂಚ ನಿರಾಳರಾಗಿದ್ದಾರೆ. ಗುರುವಾರ ಹಗಲಿನಲ್ಲಿ ಮೋಡದ ವಾತಾವರಣ ಇರಲಿದ್ದು ಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.  ಗುರುವಾರ ಬೆಳಿಗ್ಗೆ 8.30ರ ಸುಮಾರಿಗೆ ವಾತಾವರಣದ ತೇವಾಂಶ ಶೇ 67ರಷ್ಟಿತ್ತು. ಕನಿಷ್ಠ ಉಷ್ಣಾಂಶ 29.6 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.