ADVERTISEMENT

ದೆಹಲಿ | ವಾಯು ಮಾಲಿನ್ಯ ತಗ್ಗಿಸಲು 106 ಹೆಚ್ಚುವರಿ ಬಸ್‌ಗಳ ಸಂಚಾರ: ಸಚಿವ

ಪಿಟಿಐ
Published 15 ನವೆಂಬರ್ 2024, 10:33 IST
Last Updated 15 ನವೆಂಬರ್ 2024, 10:33 IST
<div class="paragraphs"><p>ದೆಹಲಿಯಲ್ಲಿ ವಾಯು ಮಾಲಿನ್ಯ </p></div>

ದೆಹಲಿಯಲ್ಲಿ ವಾಯು ಮಾಲಿನ್ಯ

   

ಪಿಟಿಐ ಚಿತ್ರ

ನವದೆಹಲಿ: ದೆಹಲಿಯ ಗಾಳಿಯ ಗುಣಮಟ್ಟವು ತೀವ್ರ ಕಳಪೆಯಾಗಿರುವುದರಿಂದ ನಗರದಲ್ಲಿ ಜಾರಿ ಮಾಡಲಾಗಿರುವ ‘ಜಿಆರ್‌ಎಪಿ –3’ (ಗ್ರೇಡೆಡ್‌ ರೆಸ್ಪಾನ್ಸ್‌ ಆ್ಯಕ್ಷನ್‌ ಪ್ಲ್ಯಾನ್‌–3) ನಿಯಮವು ಮೂರನೇ ದಿನವಾದ ಶುಕ್ರವಾರವೂ ಮುಂದುವರೆಯಿತು.

ADVERTISEMENT

‘ಜಿಆರ್‌ಎಪಿ –3’ ನಿಯಮಗಳ ಅಡಿಯಲ್ಲಿ ಅನೇಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಸರ್ಕಾರವು ನಾಗರಿಕರಿಗೆ ಅನುಕೂಲವಾಗುವಂತೆ ಕೆಲವು ಸೌಲಭ್ಯಗಳನ್ನು ಕಲ್ಪಿಸಿರುವುದಾಗಿ ದೆಹಲಿಯ ‍ಪರಿಸರ ಸಚಿವ ಗೋಪಾಲ ರಾಯ್‌ ತಿಳಿಸಿದ್ದಾರೆ.  

‘ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸಿ, ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ದೆಹಲಿಯ ಸಾರಿಗೆ ನಿಗಮದಿಂದ ಹೆಚ್ಚುವರಿ 106 ಕ್ಲಸ್ಟರ್‌ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಅಲ್ಲದೇ ಮೆಟ್ರೋ ರೈಲುಗಳು 60 ಹೆಚ್ಚುವರಿ ಟ್ರಿಪ್‌ಗಳನ್ನು ಮಾಡಲಿವೆ’ ಎಂದು ಮಾಹಿತಿ ನೀಡಿದ್ದಾರೆ. 

ನಗರವು ಸಂಪೂರ್ಣವಾಗಿ ಕಲುಷಿತ ಗಾಳಿಯಿಂದ ಆವೃತವಾಗಿದ್ದು, ಗೋಚರತೆಯ ಪ್ರಮಾಣವು ತೀವ್ರವಾಗಿ ಕುಸಿದಿದೆ. ಎಕ್ಯುಐ (ವಾಯು ಗುಣಮಟ್ಟ ಸೂಚ್ಯಂಕ) ಶುಕ್ರವಾರ ಮುಂಜಾನೆ 9 ಗಂಟೆಗೆ 411ರಷ್ಟು (400 ರಿಂದ 500 ತೀವ್ರ ಕಳಪೆ) ದಾಖಲಾಗಿದೆ. ರಾತ್ರಿ ವೇಳೆಯಲ್ಲಿ ನಗರದ ತಾಪಮಾನವು ಅತ್ಯಂತ ಕನಿಷ್ಠ 15.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. 

ಅತಿಯಾದ ಮಾಲಿನ್ಯದಿಂದಾಗಿ ಗಾಳಿಯ ಗುಣಮಟ್ಟವು ತೀವ್ರ ಕಳಪೆಯಾಗಿರುವುದರಿಂದ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಜಿಆರ್‌ಎಪಿ–3 ಅನ್ನು ಜಾರಿಗೊಳಿಸಿತು. ದೆಹಲಿಯ ಗಾಳಿಯ ಗುಣಮಟ್ಟವು ‘ತೀವ್ರ ಕಳಪೆ’ ಹಂತವನ್ನು ತಲುಪುವ ಮುನ್ನ 14 ದಿನಗಳವರೆಗೆ ‘ಅತ್ಯಂತ ಕಳಪೆ’ ಹಂತದಲ್ಲಿತ್ತು. 

‘ಜಿಆರ್‌ಎಪಿ –3 ಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜನರು ಸಾಧ್ಯವಾದಾಗ ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ಆದಷ್ಟು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಬೇಕು ಹಾಗೂ ಸ್ವಲ್ಪ ದೂರದ ಪ್ರಯಾಣಕ್ಕೆ ಸೈಕಲ್‌ಗಳನ್ನು ಬಳಸಬೇಕು’ ಎಂದು ರಾಯ್‌ ಹೇಳಿದ್ದಾರೆ.

3ನೇ ದಿನವೂ ಮುಂದುವರಿದ  ‘ಜಿಆರ್‌ಎಪಿ –3  ಸ್ವಲ್ಪ ದೂರಕ್ಕೆ ಸೈಕಲ್‌ ಬಳಸುವಂತೆ ಸಚಿವರ ಮನವಿ 

ಏನೆಲ್ಲ ನಿಷೇಧ ಯಾವುದೆಲ್ಲ ಕ್ರಮ?

* ಜಿಆರ್‌ಎಪಿ –3 ಅಡಿಯಲ್ಲಿ ದೆಹಲಿಯಲ್ಲಿ ಅನಿವಾರ್ಯವಲ್ಲದ ಕಟ್ಟಡ ಧ್ವಂಸ ಹಾಗೂ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದ್ದು ಗಣಿಗಾರಿಕೆ ಹಾಗೂ ಕ್ರಷರ್‌ಗಳ ಕಾರ್ಯಾಚರಣೆಗೆ ನಿರ್ಬಂಧ ಹೇರಲಾಗಿದೆ 

* ಖಾಸಗಿ ಕಟ್ಟಡಗಳ ನಿರ್ಮಾಣ ಹಾಗೂ ಧ್ವಂಸ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ

* ಎಲೆಕ್ಟ್ರಿಕ್‌ ಬಸ್‌ ಮತ್ತು ಸಿಎನ್‌ಜಿ ವಾಹನ ಹಾಗೂ ಬಿಎಸ್‌ –6 ಡೀಸೇಲ್‌ ಬಸ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂತರರಾಜ್ಯ ವಾಹನಗಳು ದೆಹಲಿ ಪ್ರವೇಶಿಸುವಂತಿಲ್ಲ

* ಬಿಎಸ್‌–3 ಪೆಟ್ರೋಲ್‌ ಹಾಗೂ ಬಿಎಸ್‌ –4 ಡೀಸೆಲ್‌ನ ನಾಲ್ಕು ಚಕ್ರ ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ

* 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸಲು ಸೂಚನೆ ನೀಡಲಾಗಿದೆ 

* ಪ್ರಮುಖ ರಸ್ತೆಗಳಲ್ಲಿ ನೀರು ಚುಮುಕಿಸಲು ಆದೇಶಿಸಲಾಗಿದೆ 

* ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟರೆ ಕೃತಕ ಮಳೆ ಸುರಿಸುವ ಹಾಗೂ ಇತರ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.