ADVERTISEMENT

ಅನಧಿಕೃತ ಭೇಟಿ ನೀಡದಂತೆ ರಾಹುಲ್ ಗಾಂಧಿಗೆ ದೆಹಲಿ ವಿವಿ ನೋಟಿಸ್‌

ಪಿಟಿಐ
Published 9 ಮೇ 2023, 12:48 IST
Last Updated 9 ಮೇ 2023, 12:48 IST
ದೆಹಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಬಾಲಕರ ಹಾಸ್ಟೆಲ್‌ಗೆ ಶುಕ್ರವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಊಟ ಸವಿದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ –ಪಿಟಿಐ ಚಿತ್ರ
ದೆಹಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಬಾಲಕರ ಹಾಸ್ಟೆಲ್‌ಗೆ ಶುಕ್ರವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಊಟ ಸವಿದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ –ಪಿಟಿಐ ಚಿತ್ರ   

ನವದೆಹಲಿ: ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯದ ಆವರಣಕ್ಕೆ ಯಾವುದೇ ಅನಧಿಕೃತ ಭೇಟಿ ನೀಡದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೆಹಲಿ ವಿಶ್ವವಿದ್ಯಾಲಯ ನೋಟಿಸ್‌ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ರಾಹುಲ್‌ ಗಾಂಧಿಯವರಿಗೆ ಮಂಗಳವಾರ ಇಲ್ಲವೇ ಬುಧವಾರ ನೋಟಿಸ್‌ ಕಳುಹಿಸಲಾಗುವುದು. ಈ ರೀತಿಯ ಭೇಟಿಯು ವಿದ್ಯಾರ್ಥಿಗಳಿಗೆ ಅಪಾಯಕಾರಿ. ಹಾಗಾಗಿ ಸೂಕ್ತ ನಿಯಮಾವಳಿಗಳನ್ನು ಪಾಲಿಸುವುದು ಅಗತ್ಯ ಎಂದು ಅವರಿಗೆ ತಿಳಿಸಲಾಗುವುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ವಿಕಾಸ್‌ ಗುಪ್ತಾ ಮಾಹಿತಿ ನೀಡಿದ್ದಾರೆ.

ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಶುಕ್ರವಾರ ಭೇಟಿ ನೀಡಿದ್ದ ರಾಹುಲ್‌, ಕೆಲವರೊಂದಿಗೆ ಸಮಾಲೋಚನೆ ನಡೆಸಿ, ಊಟ ಮಾಡಿದ್ದರು.

ADVERTISEMENT

'ರಾಹುಲ್‌ ಗಾಂಧಿ ಅವರ ಭೇಟಿ ಅನಧಿಕೃತವಾಗಿತ್ತು. ಹಲವು ವಿದ್ಯಾರ್ಥಿಗಳು ಅವರೊಂದಿಗೆ ಊಟ ಮಾಡಿದ್ದರು. ನಮ್ಮ ಕ್ಯಾಂಪಸ್‌ನಲ್ಲಿ ಇದನ್ನು ಸಹಿಸುವುದಿಲ್ಲ. ಇಂತಹ ನಡೆಯನ್ನು ಪುನರಾವರ್ತಿಸದಂತೆ ಹಾಗೂ ವಿದ್ಯಾರ್ಥಿಗಳಿಗೆ ಅಪಾಯ ತಂದೊಡ್ಡದಂತೆ ಸೂಚಿಸಿ, ಅವರಿಗೆ ನೋಟಿಸ್‌ ನೀಡಲಾಗುವುದು' ಎಂದು ಗುಪ್ತಾ ತಿಳಿಸಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾಗಿರುವ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ವಿಶ್ವವಿದ್ಯಾಲಯದ ಕ್ರಮವನ್ನು ಖಂಡಿಸಿದೆ. ರಾಹುಲ್‌ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯದ ಆಡಳಿತಕ್ಕೆ ಒತ್ತಡವಿದೆ ಎಂದಿದೆ.

ಈ ಆರೋಪವನ್ನು ಅಲ್ಲಗಳೆದಿರುವ ರಿಜಿಸ್ಟ್ರಾರ್‌, 'ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಇದು ಶಿಸ್ತು ಕ್ರಮವಷ್ಟೇ' ಎಂದಿದ್ದಾರೆ.

ರಾಹುಲ್‌ ಭೇಟಿ ಬೆನ್ನಲ್ಲೇ ತುರ್ತು ಪ್ರಕಟಣೆ ಬಿಡುಗಡೆ ಮಾಡಿದ್ದ ವಿಶ್ವವಿದ್ಯಾಲಯ, 'ಅನಿರಿಕ್ಷಿತ ಹಾಗೂ ಅನಧಿಕೃತ' ಭೇಟಿಯು ಭದ್ರತೆಯ ಬಗ್ಗೆ ಕಳವಳವನ್ನುಂಟು ಮಾಡಿದೆ. ವಿಶ್ವವಿದ್ಯಾಲಯದ ಆಡಳಿತವು ಇಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿತ್ತು.

ದೆಹಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಬಾಲಕರ ಹಾಸ್ಟೆಲ್‌ಗೆ ಶುಕ್ರವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.