ನವದೆಹಲಿ: ಗಣರಾಜ್ಯೋತ್ಸವದ ದಿನದಂದು ರೈತರ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ ಸಾರ್ವಜನಿಕರಿಂದ 1,700ರಷ್ಟು ವಿಡಿಯೊ ತುಣುಕುಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.
ಇದನ್ನು ವಿಧಿ ವಿಜ್ಞಾನ ತಜ್ಞರಿಗೆ ಹಸ್ತಾಂತರಿಸಲಾಗಿದ್ದು, ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಬಿ.ಕೆ. ಸಿಂಗ್ ತಿಳಿಸಿದ್ದಾರೆ.
ಕೆಂಪುಕೋಟೆ ಹಾಗೂ ಐಟಿಒದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗವು, ಮೊಬೈಲ್ ಫೋನ್ ಕರೆ ಹಾಗೂ ಟ್ರ್ಯಾಕ್ಟರ್‌ಗಳ ನೊಂದಣಿ ಸಂಖ್ಯೆಗಳ ಆಧಾರದಲ್ಲಿ ಪರೀಶೀಲನೆಯನ್ನು ನಡೆಸುತ್ತಿದೆ.
ವಿಡಿಯೊ ತುಣುಕು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ವಿಧಿ ವಿಜ್ಞಾನ ತಂಡಕ್ಕೆ ರವಾನಿಸಲಾಗಿದೆ ಎಂದವರು ವಿವರಿಸಿದರು.
ಡ್ರೋನ್ ಕ್ಯಾಮೆರಾಗಳಿಂದ ಲಭಿಸಿದ ವಿಡಿಯೊಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.
ಇದನ್ನೂ ಓದಿ:ದೆಹಲಿ ಹಿಂಸಾಚಾರ| 38 ದೂರು, 80ಕ್ಕೂ ಹೆಚ್ಚು ಬಂಧನ
ಈ ಮೊದಲು ಹಿಂಸಾಚಾರದ ಸಂಬಂಧ ಮಾಹಿತಿ ಹಾಗೂ ಪುರಾವೆ ಓದಗಿಸುವಂತೆ ದೆಹಲಿ ಪೊಲೀಸ್ ಪ್ರಮುಖ ದಿನಪತ್ರಿಕೆಯಲ್ಲಿ ವರದಿಯನ್ನು ಪ್ರಕಟಿಸಿತ್ತು.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಜನವರಿ 26 ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಪೆರೇಡ್ ಹಮ್ಮಿಕೊಂಡಿದ್ದರು. ಪೊಲೀಸರು ನಿಗದಿಪಡಿಸಿದ ಮಾರ್ಗವನ್ನು ಉಲ್ಲಂಘಿಸಿ ರಾಷ್ಟ್ರ ರಾಜಧಾನಿಗೆ ಪ್ರವೇಶಿಸಿದ್ದ ಪ್ರತಿಭಟನಾಕಾರರ ಗುಂಪು ಹಿಂಸಾಚಾರದಲ್ಲಿ ಭಾಗಿಯಾಗಿತ್ತು. ಘಟನೆಯಲ್ಲಿ 400ರಷ್ಟು ಪೊಲೀಸರು ಗಾಯಗೊಂಡಿದ್ದರು. ಅಲ್ಲದೆ ಟ್ರ್ಯಾಕ್ಟರ್ ಮಗುಚಿ ಓರ್ವ ಪ್ರತಿಭಟನಾಕಾರ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.