ADVERTISEMENT

ದೆಹಲಿಯಲ್ಲಿ ಜಲಕ್ಷಾಮ: ಹರಿಯಾಣದಿಂದ ಹೆಚ್ಚಿನ ನೀರಿಗಾಗಿ ಸಚಿವೆ ಅತಿಶಿ ಉಪವಾಸ

ಪಿಟಿಐ
Published 21 ಜೂನ್ 2024, 9:40 IST
Last Updated 21 ಜೂನ್ 2024, 9:40 IST
<div class="paragraphs"><p>ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ ಸಿಂಗ್ ಅವರೊಂದಿಗೆ ಸಂಜಯ್ ಸಿಂಗ್ ಅವರು ನೀರಿನ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು</p></div>

ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ ಸಿಂಗ್ ಅವರೊಂದಿಗೆ ಸಂಜಯ್ ಸಿಂಗ್ ಅವರು ನೀರಿನ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು

   

ಪಿಟಿಐ ಚಿತ್ರ

ನವದೆಹಲಿ: ದೆಹಲಿಯಲ್ಲಿ ಬಿಸಿಲಿನ ತಾಪ ಏರುಮುಖವಾಗಿದೆ. ಇದರ ಜತೆಯಲ್ಲೇ ನೀರಿನ ಕ್ಷಾಮವೂ ತಲೆದೋರಿದೆ. ಹರಿಯಾಣದಿಂದ ಹೆಚ್ಚುವರಿ ನೀರು ಹರಿಸುವಂತೆ ಆಗ್ರಹಿಸಿ ದೆಹಲಿ ಸರ್ಕಾರದ ಸಚಿವೆ ಅತಿಶಿ ಅವರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ, ಎಎಪಿ ಸಂಸದ ಸಂಜಯ್ ಸಿಂಗ್ ಹಾಗೂ ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಿಹಾರ್ ಜೈಲಿನಲ್ಲಿರುವ ಅರವಿಂದ ಕೇಜ್ರಿವಾಲ್ ಅವರ ಸಂದೇಶವನ್ನು ಸುನೀತಾ ಓದಿದರು. ‘ನೀರಿಗಾಗಿ ಜನರು ಪರಿತಪಿಸುತ್ತಿರುವುದನ್ನು ಟಿ.ವಿ.ಯಲ್ಲಿ ನೋಡಿದ್ದೇನೆ. ಬಾಯಾರಿದವರಿಗೆ ನೀರು ನೀಡುವುದು ನಮ್ಮ ಸಂಸ್ಕೃತಿ. ದೆಹಲಿಗೆ ಪಕ್ಕದ ರಾಜ್ಯಗಳಿಂದ ನೀರು ಹರಿಯುತ್ತದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ನೆರೆಯ ರಾಜ್ಯಗಳು ದೆಹಲಿಗೆ ನೆರವಾಗಲಿವೆ ಎಂಬ ವಿಶ್ವಾಸವಿದೆ. ಹರಿಯಾಣ ತನ್ನ ಪಾಲನ್ನು ತುಸು ಕಡಿಮೆ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ಅತಿಶಿ ತಪಸ್ಸು ಯಶಸ್ಸಿಯಾಗಲಿದೆ’ ಎಂದು ಅವರು ಆಶಿಸಿದ್ದಾರೆ.

‘ದೆಹಲಿ ಹಾಗೂ ಹರಿಯಾಣದಲ್ಲಿ ಎರಡು ಬೇರೆ ಬೇರೆ ಪಕ್ಷಗಳು ಸರ್ಕಾರ ರಚಿಸಿವೆ. ಆದರೆ ನೀರಿಗಾಗಿ ಈ ಸಮಯದಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ’ ಎಂದು ಹರಿಯಾಣದಲ್ಲಿನ ಬಿಜೆಪಿ ಸರ್ಕಾರಕ್ಕೆ ಕೇಜ್ರಿವಾಲ್ ಹೇಳಿದ್ದಾರೆ.

ಉಪವಾಸ ಆರಂಭಕ್ಕೂ ಮೊದಲು ಅತಿಶಿ, ಸುನೀತಾ ಹಾಗೂ ಭಾರದ್ವಾಜ್ ಅವರು ರಾಜ್‌ಘಾಟ್‌ನಲ್ಲಿರುವ ಮಹಾತ್ಮಾಗಾಂಧಿ ಅವರ ಸಮಾದಿಗೆ ಗೌರವ ಸಮರ್ಪಿಸಿದರು.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದೆ. ಜನರಿಗೆ ನೀರಿಗಾಗಿ ಬೇಡಿಕೆ ಹೆಚ್ಚಾಗಿದೆ. ಜನರಿಗೆ ಹೆಚ್ಚಿನ ನೀರು ಬೇಕಿದೆ. ಆದರೆ ಪೂರೈಕೆ ಕಡಿಮೆ ಇದೆ. ಅಗತ್ಯವಿರುವಷ್ಟು ನೀರು ಪೂರೈಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹರಿಯಾಣ ಸರ್ಕಾರಕ್ಕೆ ಅತಿಶಿ ಪತ್ರ ಬರೆದಿದ್ದಾರೆ.

‘ನೀರಿಗಾಗಿ ಮಕ್ಕಳು ಸೇರಿದಂತೆ ದೆಹಲಿ ಜನರು ಎದುರಿಸುತ್ತಿರುವ ಸಂಕಷ್ಟ ನೋಡಲಾರೆ. ಉಪವಾಸ ಸತ್ಯಾಗ್ರಹ ಕೈಗೊಳ್ಳುವುದನ್ನು ಹೊರತುಪಡಿಸಿ ನನ್ನ ಬಳಿ ಬೇರೆ ಯಾವುದೇ ಮಾರ್ಗೋಪಾಯ ಉಳಿದಿಲ್ಲ. ಹರಿಯಾಣ ನೀರು ಹರಿಸುವವರೆಗೂ ದೆಹಲಿ ಜನರಿಗಾಗಿ ಈ ಸತ್ಯಾಗ್ರಹ ಮುಂದುವರಿಯಲಿದೆ’ ಎಂದು ಅತಿಶಿ ಹೇಳಿದ್ದಾರೆ.

‘ಕಳೆದ ಕೆಲ ವಾರಗಳಿಂದ ನಗರದ ಜನತೆಗೆ 1,005ಎಂಜಿಡಿಯಷ್ಟು ನೀರನ್ನು ದೆಹಲಿ ಪಡೆಯುತ್ತಿದೆ. ಹರಿಯಾಣ ಸರ್ಕಾರವು ದೆಹಲಿಗೆ 613 ಎಂಜಿಡಿ ನೀರು ಬದಲು 513 ಎಂಜಿಡಿಯಷ್ಟನ್ನೇ ನೀಡುತ್ತಿದೆ. 100 ಎಂಜಿಡಿ ಕೊರತೆಯಿಂದಾಗಿ ದೆಹಲಿಯ 28 ಲಕ್ಷ ಜನ ಪರದಾಡುವಂತಾಗಿದೆ. ಕಳೆದ ಎರಡು ದಿನಗಳಲ್ಲಿ 100ರ ಬದಲು 120 ಎಂಜಿಡಿ ಕೊರತೆಯನ್ನು ದೆಹಲಿ ಅನುಭವಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.