ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಲೆದೂರಿದ ನೀರಿನ ಬಿಕ್ಕಟ್ಟಿನಿಂದಾಗಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕೆಲ ಅಪರಿಚಿತರು ಜಲಮಂಡಳಿ ಕಚೇರಿಯನ್ನೇ ಧ್ವಂಸಗೊಳಿಸಿದ್ದಾರೆ.
ಛತ್ತಪುರ ಪ್ರದೇಶದಲ್ಲಿರುವ ಜಲಮಂಡಳಿ ಕಚೇರಿಗೆ ಅಪರಿಚಿತರ ಗುಂಪು ಮಡಿಕೆಗಳನ್ನು ಎಸೆದು ಕಿಟಕಿಯ ಗಾಜುಗಳನ್ನು ಒಡೆದು ಹಾಕಿದೆ. ಇದರ ವಿಡಿಯೊವನ್ನು ಎಎನ್‌ಐ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿ ವಿಡಿಯೊ ಹಂಚಿಕೊಂಡಿರುವ ಎಎಪಿ, ‘ಬಿಜೆಪಿ ಕಾರ್ಯಕರ್ತರು ಹೇಗೆ ದೆಹಲಿ ಜಲಮಂಡಳಿ ಕಚೇರಿಗೆ ಹಾನಿ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿ. ‘ಬಿಜೆಪಿ ಜಿಂದಾಬಾದ್’ ಎನ್ನುವ ಘೋಷಣೆಯನ್ನೂ ಕೂಗಿದ್ದಾರೆ. ಒಂದೆಡೆ ಹರಿಯಾಣ ಬಿಜೆಪಿ ಸರ್ಕಾರ ದೆಹಲಿಗೆ ಬರಬೇಕಾದ ನೀರನ್ನು ತಡೆ ಹಿಡಿಯುತ್ತಿದೆ. ಇನ್ನೊಂದೆಡೆ ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರು ನಾಗರಿಕರ ಆಸ್ತಿಗೆ ಹಾನಿಗೊಳಿಸುತ್ತಿದ್ದಾರೆ’ ಎಂದು ಎಕ್ಸ್‌ನಲ್ಲಿ ಹೇಳಿದೆ.
ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ರಮೇಶ್ ಬಿಧುರಿ ‘ಜನರು ಸಿಟ್ಟಿಗೆದ್ದಾಗ ಏನು ಬೇಕಾದರೂ ಮಾಡುತ್ತಾರೆ, ಅದು ಸಹಜ ಕೂಡ. ಅದು ಸರ್ಕಾರ ಮತ್ತು ನಾಗರಿಕರ ಆಸ್ತಿಯಾಗಿದೆ. ಅದನ್ನು ಹಾನಿಗೊಳಿಸಿದರೆ ಪ್ರಯೋಜನವಿಲ್ಲ. ಪ್ರತಿಭಟನೆ ವೇಳೆ ಜನರನ್ನು ನಿಯಂತ್ರಿಸಿದ ಬಿಜೆಪಿ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.