ADVERTISEMENT

ದೆಹಲಿಯ ವಿಗ್ ವ್ಯಾಪಾರಿ ಕಳವು ಮಾಡಿದ ತಲೆಗೂದಲಿನ ಬೆಲೆ ಎಷ್ಟು ಗೊತ್ತೇ?

ಏಜೆನ್ಸೀಸ್
Published 7 ಆಗಸ್ಟ್ 2018, 9:05 IST
Last Updated 7 ಆಗಸ್ಟ್ 2018, 9:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆತ ವಿಗ್, ತಲೆಗೂದಲಿನ ರಫ್ತು ವ್ಯಾಪಾರಿ. ವ್ಯವಹಾರ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ನಷ್ಟವನ್ನು ಸರಿದೂಗಿಸಲು ಆತ ಕಂಡುಕೊಂಡ ಮಾರ್ಗ, ತನ್ನ ಮಾರುಕಟ್ಟೆ ಸ್ಪರ್ಧಿಯ ಬಳಿ ಇರುವ ಕೂದಲನ್ನು ಕಳ್ಳತನ ಮಾಡುವುದು! ಹಾಗೆ ಕಳ್ಳತನ ಮಾಡಿದ ಕೂದಲಿನ ಮೌಲ್ಯ ಎಷ್ಟು ಗೊತ್ತೇ? ಬರೋಬ್ಬರಿ 25 ಲಕ್ಷ!

ಹೌದು, ₹25 ಲಕ್ಷ ಮೌಲ್ಯದ 200 ಕಿಲೋ ಕೂದಲನ್ನು ಕಳವು ಮಾಡಿದ ವ್ಯಾಪಾರಿ ಮತ್ತು ಸಹಚರರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ನಡೆದಿದ್ದೇನು?: ಅಜಯ್ ಕುಮಾರ್ ಎಂಬುವವರೇ ಕೂದಲು ಕಳ್ಳತನ ಮಾಡಿ ಸೆರೆಯಾಗಿರುವವರು. ತಮ್ಮ ಸಹಚರ ಮಂಗಲ್ ಸೇನ್ ಎಂಬುವವರನ್ನು ದೆಹಲಿಯ ನಾನ್‌ಗ್ಲೊಯಿಯಲ್ಲಿರುವ ಜಹಾಂಗಿರ್ ಎಂಟರ್‌ಪ್ರೈಸಸ್‌ಗೆ ಜುಲೈ 25ರಂದು ಕಳುಹಿಸಿ ಅಲ್ಲಿನ ಮಾಹಿತಿ ಪಡೆದುಕೊಂಡು ಬರುವಂತೆ ಸೂಚಿಸಿದ್ದರು. ಅದರಂತೆ, ಗ್ರಾಹಕನ ಸೋಗಿನಲ್ಲಿ ಅಲ್ಲಿಗೆ ತೆರಳಿದ್ದ ಸೇನ್ ಮಾಹಿತಿ ಕಲೆ ಹಾಕಿ ವಾಪಸಾಗಿದ್ದರು. ಇದಾದ ಎರಡು ದಿನಗಳ ನಂತರ ಅಜಯ್ ಮತ್ತು ಸೇನ್ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಲ್ಲಿಗೆ ತೆರಳಿ ಅಂಗಡಿಯ ಮಾಲೀಕ ಹುಸೇನ್ ಅವರನ್ನು ಬಂದೂಕು ಮತ್ತು ಚಾಕು ತೋರಿಸಿ ಬೆದರಿಸಿ ಕೂದಲನ್ನು ಕದ್ದೊಯ್ದಿದ್ದರು. ಜತೆಗೆ, ₹30 ಸಾವಿರ ನಗದನ್ನೂ ಎಗರಿಸಿದ್ದರು.

ಈ ಪೈಕಿ ಸೇನ್, ಉತ್ತರ ಪ್ರದೇಶದ ರಾಮ್‌ಪುರದಲ್ಲಿರುವುದನ್ನು ಪತ್ತೆ ಮಾಡುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಸೇನ್ ಅವರನ್ನು ಸಂಪರ್ಕಿಸಲು ಬಳಸಿದ್ದ ಮೊಬೈಲ್ ದೂರವಾಣಿ ಸಂಖ್ಯೆಯ ಸಹಾಯದಿಂದ ಸೇನ್ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗಿದೆ. ಭಾನುವಾರ ಸೇನ್‌ ಅನ್ನು ಬಂಧಿಸಿದ ಪೊಲೀಸರು, ಕಳವಾಗಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಸೇನ್‌ ಅನ್ನು ತನಗೆ ಪರಿಚಯಿಸಿದ್ದು ಕುಮಾರ್ ಎಂದು ಹುಸೇನ್ ತಿಳಿಸಿದ್ದರು. ಸೇನ್‌ ಅನ್ನು ವಿಚಾರಣೆಗೆ ಒಳಪಡಿಸಿದಾಗ, ಕಳವು ಮಾಡಿರುವ ಕೂದಲು ಕುಮಾರ್ ಅವರ ಸುಲ್ತಾನ್‌ಪುರಿ ನಿವಾಸದಲ್ಲಿರುವುದು ತಿಳಿದುಬಂದಿದೆ. ಅಲ್ಲಿಗೆ ತೆರಳಿ ಶೋಧ ನಡೆಸಿದಾಗ 118 ಕಿಲೋ ಕೂದಲು ಮತ್ತು ಕಳ್ಳತನಕ್ಕೆ ಬಳಸಿದ ನಾಡ ಪಿಸ್ತೂಲ್ ದೊರೆತಿದೆ ಎಂದು ಡಿಸಿಪಿ ಸೇಜು ಪಿ. ತಿಳಿಸಿದ್ದಾರೆ.

ತಿರುಪತಿ ಮತ್ತು ಆಂಧ್ರ ಪ್ರದೇಶದ ಇತರ ದೇಗುಲಗಳಿಂದ ಕೂದಲನ್ನು ಹರಾಜಿನ ಮೂಲಕ ಖರೀದಿಸಿರುವುದಾಗಿ ಹುಸೇನ್ ತಿಳಿಸಿದ್ದಾರೆ. ಒಂದು ಕಿಲೋಕೂದಲನ್ನು ₹22 ಸಾವಿರದಿಂದ ₹23 ಸಾವಿರಕ್ಕೆ ಖರೀದಿಸಿ ₹26 ಸಾವಿರದಿಂದ ₹28 ಸಾವಿರಕ್ಕೆ ಮಾರಾಟ ಮಾಡುತ್ತೇವೆ. ಉದ್ದದ ಕೂದಲಿಗೆ ಹೆಚ್ಚು ಬೆಲೆ ಇದೆ ಎಂದು ಹುಸೇನ್ ಹೇಳಿದ್ದಾರೆ

ಹೆಚ್ಚಿನ ಕೂದಲನ್ನು ಆನ್‌ಲೈನ್ ಮೂಲಕ ವಿದೇಶಿ ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತಿದೆ. ಬೇಡಿಕೆ ಬಂದರೆ ವಿಗ್‌ ಸಹ ತಯಾರಿಸುತ್ತೇವೆ. ಒಂದು ಕಿಲೋ ಕೂದಲನ್ನು ಸುಮಾರು ₹80 ಸಾವಿರಕ್ಕೆ ಮಾರಾಟ ಮಾಡಿದ್ದೂ ಇದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.