ADVERTISEMENT

ಸಹಜೀವನ ಸಂಗಾತಿಗೆ ಬೆಂಕಿ ಹಚ್ಚಿದ್ದ ಆರೋಪಿ ಬಂಧನ; ಸಂತ್ರಸ್ತೆ ಸಾವು

ಐಎಎನ್ಎಸ್
Published 21 ಫೆಬ್ರುವರಿ 2023, 6:09 IST
Last Updated 21 ಫೆಬ್ರುವರಿ 2023, 6:09 IST
   

ನವದೆಹಲಿ: ಸಹಜೀವನ ಸಂಗಾತಿಯಿಂದಲೇ ಬೆಂಕಿ ಹಚ್ಚಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ 28 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿರುವ ಪ್ರಕರಣ ರಾಷ್ಟ್ರ ರಾಜಧಾನಿಯ ರೋಹಿಣಿ ಪ್ರದೇಶದಲ್ಲಿ ವರದಿಯಾಗಿದೆ.

ಆರೋಪಿ ಮೋಹಿತ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬೆಂಕಿಯಿಂದ ಗಾಯಗೊಂಡಿರುವ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಎಸ್‌ಜಿಎಂ ಆಸ್ಪತ್ರೆಯು ಅಮನ್‌ ವಿಹಾರ್‌ ಪೊಲೀಸ್‌ ಠಾಣೆಗೆ ಫೆಬ್ರುವರಿ 11ರಂದು ಮಾಹಿತಿ ನೀಡಿತ್ತು.

ADVERTISEMENT

'ತಕ್ಷಣವೇ ಪೊಲೀಸರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ಮೋನಿಕಾ (ಹೆಸರು ಬದಲಿಸಲಾಗಿದೆ) ಅವರಿಂದ ಮಾಹಿತಿ ಪಡೆಯಲು ಪ್ರಯತ್ನಿಸಿತ್ತು. ಆದರೆ, ಸಂತ್ರಸ್ತೆ ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್‌ಜಂಗ್‌ ಆಸ್ಪತ್ರೆಗೆ ಹಾಗೂ ಎಐಐಎಂಎಸ್‌ನ ಟ್ರಾಮಾ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಬಲ್‌ಬಿರ್‌ ವಿಹಾರ್‌ ನಿವಾಸಿಯಾಗಿರುವ ಮೋನಿಕಾ ಪಾದರಕ್ಷೆ ತಯಾರಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು' ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತಿಯಿಂದ ದೂರಾಗಿದ್ದ ಮೋನಿಕಾ, ಕಳೆದ ಆರು ವರ್ಷಗಳಿಂದ ಮೋಹಿತ್‌ ಜೊತೆ ಸಹಜೀವನ ನಡೆಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಟ್ರಾಮಾ ಕೇಂದ್ರದಲ್ಲೇ ಮೃತಪಟ್ಟಿರುವ ಮೋನಿಕಾ ಅವರಿಗೆ ಇಬ್ಬರು ಮಕ್ಕಳಿದ್ದು, ಮೊದಲ ಮದುವೆಯ ನಂತರ ಹುಟ್ಟಿದ ಗಂಡು ಮಗುವಿಗೆ 8 ವರ್ಷ ಹಾಗೂ ನಂತರದ ಸಂಬಂಧದಿಂದ ಹುಟ್ಟಿದ ಹೆಣ್ಣು ಮಗುವಿಗೆ 4 ವರ್ಷ ವಯಸ್ಸಾಗಿದೆ. ಶವಪರೀಕ್ಷೆ ನಡೆಸಲಾಗಿದೆ. ಆಕೆಯ ಕುಟುಂಬದವರ ಹೇಳಿಕೆಗಳನ್ನು ಪರಿಗಣಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 302ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದೂ ಅವರು ವಿವರಿಸಿದ್ದಾರೆ.

ಮೋಹಿತ್‌ ತನ್ನ ಸ್ನೇಹಿತನೊಂದಿಗೆ ಡ್ರಗ್ಸ್‌ ಪಡೆಯುತ್ತಿರುವುದನ್ನು ಗಮನಿಸಿದ್ದ ಮೋನಿಕಾ, ಫೆಬ್ರುವರಿ 10ರ ರಾತ್ರಿ ಗಲಾಟೆ ಮಾಡಿದ್ದರು ಎಂದು ಕುಟುಂಬದವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.