ADVERTISEMENT

₹2000 ನೋಟಿಗಾಗಿ ರೈಲು ಹಳಿ ಮೇಲೆ ಬಿದ್ದ ಯುವತಿ: ಅದೃಷ್ಟವಶಾತ್‌ ಬಚಾವ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 10:12 IST
Last Updated 13 ಮಾರ್ಚ್ 2019, 10:12 IST
   

ನವದೆಹಲಿ:₹2000 ನೋಟನ್ನು ತೆಗೆದುಕೊಳ್ಳಲುಮೆಟ್ರೊ ರೈಲು ಹಳಿಗಳ ಮೇಲೆ ಹಾರಿದ್ದ ಯುವತಿಯ ಮೇಲೆ ರೈಲು ಹರಿದರೂಪ್ರಾಣಾಪಾಯದಿಂದ ಪಾರಾಗಿರುವಘಟನೆ ದೆಹಲಿಯಲ್ಲಿ ನಡೆದಿದೆ.

ದ್ವಾರಕಾ ಮೆಟ್ರೊ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಯುವತಿಯನ್ನುಚೇತನಾ ಶರ್ಮಾ ಎಂದು ಗುರುತಿಸಲಾಗಿದೆ.

ಚೇತನಾ ಶರ್ಮಾ ಮಂಗಳವಾರ ಬೆಳಗ್ಗೆ ದ್ವಾರಕಾಮೆಟ್ರೊ ನಿಲ್ದಾಣಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಮೆಟ್ರೊ ರೈಲು ಬರುವಿಕೆಗೆ ಕಾಯುತ್ತಿದ್ದ ಅವರು ರೈಲು ಹಳಿಯ ಮೇಲೆ ₹2000 ನೋಟು ಬಿದ್ದಿರುವುದನ್ನು ಗಮನಿಸಿದ್ದಾರೆ. ಅದನ್ನು ತೆಗೆದುಕೊಳ್ಳುವ ಸಲುವಾಗಿ ಹಳಿಗಳ ಮೇಲೆ ಹಾರಿದ ಕೂಡಲೇ ಮೆಟ್ರೊ ರೈಲು ಬಂದಿದೆ. ರೈಲು ಬರುವುದನ್ನು ಗಮನಿಸಿದ ಚೇತನಾ ಹಳಿಗಳ ಮಧ್ಯೆ ಮಲಗಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.ಇದನ್ನು ಗಮನಿಸಿದ ಕೇಂದ್ರ ಕೈಗಾರಿಕಾಪಡೆಯ ಸಿಬ್ಬಂದಿಗಳು ರೈಲು ಚಾಲಕನಿಗೆ ಸುದ್ದಿ ಮುಟ್ಟಿಸಿದ್ದಾರೆ, ಚಾಲಕ ರೈಲು ನಿಲ್ಲಿಸುವ ಹೊತ್ತಿಗೆ ಆ ಯುವತಿಯ ಮೇಲೆ ರೈಲಿನ ಎರಡು ಬೋಗಿಗಳು ಹರಿದು ಹೋಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಹಳಿಗಳ ಮಧ್ಯೆ ಮಲಗಿದ್ದರಿಂದ ಯುವತಿಗೆ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಕೇಂದ್ರ ಕೈಗಾರಿಕಾಪಡೆಯ ಸಿಬ್ಬಂದಿಗಳು ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ₹2000 ನೋಟಿಗಾಗಿ ಹಳಿಗಳ ಮೇಲೆ ಹಾರಿದ್ದಾಗಿ ಯುವತಿ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿಯ ಕಡೆಯಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಮನೆಗೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.