ನವದೆಹಲಿ: ದೆಹಲಿಯ ಯಮುನಾ ನದಿಯ ನೀರಿನ ಮಟ್ಟವು ಇಂದು (ಭಾನುವಾರ) ಮತ್ತೊಮ್ಮೆ ಅಪಾಯದ ಮಟ್ಟವನ್ನು (206.31 ಮೀಟರ್) ಮೀರಿದೆ. ಇದರಿಂದಾಗಿ ಪ್ರವಾಹ ಪೀಡಿತ ತಗ್ಗು ಪ್ರದೇಶಗಳಲ್ಲಿ ಕೈಗೊಂಡಿರುವ ಪುನರ್ವಸತಿ ಕಾರ್ಯಾಚರಣೆಯು ವಿಳಂಬವಾಗಿದೆ.
ಸಂಜೆ 4 ಗಂಟೆಗೆ ಯುಮುನಾ ನದಿ ಮಟ್ಟವು 206.31 ಮೀಟರ್ ರಷ್ಟಿದೆ ಎಂದು ಕೇಂದ್ರ ಜಲ ಮಂಡಳಿ (ಸಿಡಬ್ಲ್ಯೂಸಿ) ತಿಳಿಸಿದೆ.
ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಅಪಾಯ ಮಟ್ಟದಲ್ಲಿದ್ದ ಯಮುನಾ ನದಿ ನೀರಿನ ಹರಿವು ಶನಿವಾರ ಬೆಳಿಗ್ಗೆ ತುಸು ತಗ್ಗಿತ್ತು. ಆದರೆ, ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ನದಿ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯಾಗಿದೆ.
ಸಿಡಬ್ಲ್ಯುಸಿ ದತ್ತಾಂಶದ ಪ್ರಕಾರ, ಶುಕ್ರವಾರ ಬೆಳಿಗ್ಗೆ 6 ಗಂಟೆ ವೇಳೆಗೆ ನದಿ ನೀರಿನ ಮಟ್ಟ 205.29 ಮೀಟರ್ ಇತ್ತು. ಶನಿವಾರ ಬೆಳಿಗ್ಗೆ 6 ಗಂಟೆ ವೇಳೆಗೆ 205.29 ಮೀಟರ್‌ಗೆ ಇಳಿದಿತ್ತು. ಯಮುನಾ ನಗರದಲ್ಲಿನ ಹಥನಿಕುಂಡ ಬ್ಯಾರೇಜ್‌ನಲ್ಲಿ ಬೆಳಿಗ್ಗೆ 9 ಗಂಟೆ ವೇಳೆ ನೀರಿನ ಹರಿವಿನ ಪ್ರಮಾಣ 1.47 ಲಕ್ಷ ಕ್ಯುಸೆಕ್ ಇತ್ತು.
ಜುಲೈ 25ರವರೆಗೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ. ಮಳೆಯಿಂದಾಗಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾದರೆ, ತಗ್ಗು ಪ್ರದೇಶದಲ್ಲಿ ಸಿಲುಕಿರುವ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗಿದೆ.
ಓದಿ... ದೇಶದಲ್ಲಿ ಕೆಟ್ಟ ವಿಷಯಕ್ಕಿಂತ 40 ಪಟ್ಟು ಹೆಚ್ಚು ಒಳ್ಳೆಯ ವಿಷಯಗಳ ಚರ್ಚೆ: ಮೋಹನ್ ಭಾಗವತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.