ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು(ಎಕ್ಯೂಐ) ಮಂಗಳವಾರ ಬೆಳಿಗ್ಗೆ 392 ಕ್ಕೆಹೆಚ್ಚಿದ್ದು, ‘ಅಪಾಯದ ಸ್ಥಿತಿ’ ಮುಂದುವರಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾಹಿತಿ ನೀಡಿದೆ.
ನಿನ್ನೆ ಬೆಳಿಗ್ಗೆ 9 ಗಂಟೆಗೆ ಸೂಚ್ಯಂಕ 281 ದಾಖಲಾಗಿತ್ತು. ಇಂದು 392ಕ್ಕೆ ಹೆಚ್ಚಳವಾಗಿದೆ ಎಂದು ಸಿಪಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
38 ನಿಗಾ ಕೇಂದ್ರಗಳ ಪೈಕಿ 9 ಕೇಂದ್ರಗಳಲ್ಲಿ ಎಕ್ಯೂಐ 450ಕ್ಕೂ ಹೆಚ್ಚಿದೆ. 19 ಕೇಂದ್ರಗಳಲ್ಲಿ 400–450ರ ಆಸುಪಾಸಿನಲ್ಲಿದೆ. ಉಳಿದೆಡೆಯೂ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲಿಯೇ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರದಿಂದ (ನ.24) ವಾಯು ಗುಣಮಟ್ಟ ತೀವ್ರ ಅಪಾಯಕಾರಿ ಹಂತಕ್ಕೆ ಕುಸಿದಿತ್ತು. ಕಳೆದ ಗುರುವಾರ ತುಸು ಇಳಿಕೆಯಾಗಿತ್ತಾದರೂ, ಶುಕ್ರವಾರದಿಂದ ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ.
ಎಕ್ಯೂಐ ಪ್ರಮಾಣ...
ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ತೀವ್ರಕ್ಕಿಂತಲೂ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.