ADVERTISEMENT

ಸತತ ನಾಲ್ಕನೇ ದಿನವೂ ದೆಹಲಿ ಗಾಳಿಯ ಗುಣಮಟ್ಟ 'ತೀವ್ರ ಕಳಪೆ'

ಪಿಟಿಐ
Published 16 ನವೆಂಬರ್ 2024, 5:44 IST
Last Updated 16 ನವೆಂಬರ್ 2024, 5:44 IST
   

ನವದೆಹಲಿ: ದೆಹಲಿಯಲ್ಲಿ ಸತತ ನಾಲ್ಕನೇ ದಿನವೂ ಗಾಳಿಯ ಗುಣಮಟ್ಟವು ತೀವ್ರ ಕಳಪೆ ಮಟಕ್ಕೆ ಕುಸಿದಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (AQI) 407ರಷ್ಟು ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೇಳಿದೆ.

ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ತೀವ್ರಕ್ಕಿಂತಲೂ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

‘ಜಿಆರ್‌ಎಪಿ –3’ ನಿಯಮ ಜಾರಿ:

ದೆಹಲಿಯ ಗಾಳಿಯ ಗುಣಮಟ್ಟವು ತೀವ್ರ ಕಳಪೆಯಾಗಿರುವುದರಿಂದ ನಗರದಲ್ಲಿ ‘ಜಿಆರ್‌ಎಪಿ –3’ (ಗ್ರೇಡೆಡ್‌ ರೆಸ್ಪಾನ್ಸ್‌ ಆ್ಯಕ್ಷನ್‌ ಪ್ಲ್ಯಾನ್‌–3) ನಿಯಮವನ್ನು ಜಾರಿ ಮಾಡಲಾಗಿದೆ. ‘ಜಿಆರ್‌ಎಪಿ –3’ ನಿಯಮಗಳ ಅಡಿಯಲ್ಲಿ ಅನೇಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಸರ್ಕಾರವು ನಾಗರಿಕರಿಗೆ ಅನುಕೂಲವಾಗುವಂತೆ ಕೆಲವು ಸೌಲಭ್ಯಗಳನ್ನು ಕಲ್ಪಿಸಿದೆ.

ADVERTISEMENT

‘ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸಿ, ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ದೆಹಲಿಯ ಸಾರಿಗೆ ನಿಗಮದಿಂದ ಹೆಚ್ಚುವರಿ 106 ಕ್ಲಸ್ಟರ್‌ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಅಲ್ಲದೇ ಮೆಟ್ರೊ ರೈಲುಗಳು 60 ಹೆಚ್ಚುವರಿ ಟ್ರಿಪ್‌ಗಳನ್ನು ಮಾಡಲಿವೆ’ ಎಂದು ದೆಹಲಿಯ ‍ಪರಿಸರ ಸಚಿವ ಗೋಪಾಲ ರಾಯ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.