ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರವೂ ವಾಯು ಗುಣಮಟ್ಟ ವಿಷಮ ಸ್ಥಿತಿಯಲ್ಲಿ ಮುಂದುವರಿದಿದೆ.
ಕನಿಷ್ಠ ತಾಪಮಾನ 15.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ಋತುವಿನ ಸರಾಸರಿಗಿಂತ 1.8 ಡಿಗ್ರಿಯಷ್ಟು ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಳೆಗ್ಗೆ 9 ಗಂಟೆಗೆ ವಾಯು ಗುಣಮಟ್ಟದ ಸೂಚ್ಯಂಕವು (ಎಕ್ಯೂಐ) 429 ಅಂಶದಷ್ಟಿತ್ತು ಎಂದು 'ಸಮೀರ್ ಆ್ಯಪ್' ತಿಳಿಸಿದೆ.
ವಾಯು ಗುಣಮಟ್ಟ ಸೂಚ್ಯಂಕದ ಬಗ್ಗೆ ಪ್ರತಿ ಗಂಟೆಗೊಮ್ಮೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ನೀಡುವ ಮಾಹಿತಿಯನ್ನು ಈ ಸರ್ಕಾರಿ ಆ್ಯಪ್ ಒದಗಿಸುತ್ತದೆ.
ಶನಿವಾರದಂದು 24 ತಾಸಿನ ಸರಾಸರಿ ಎಕ್ಯೂಐ ಮಟ್ಟ 417 ಅಂಶದಷ್ಟಿತ್ತು.
ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, 0 ಮತ್ತು 50ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತಿ ಕಳಪೆ’, ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.
ದೆಹಲಿಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಳ್ಳಲಿದ್ದು, 30 ಡಿಗ್ರಿ ಗರಿಷ್ಠ ಉಷ್ಠಾಂಶ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.