ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಸತತ ಆರನೇ ದಿನವಾದ ಶುಕ್ರವಾರವೂ ದಟ್ಟವಾದ ವಿಷಕಾರಿ ಹೊಗೆ ಹಾಗೂ ಮಂಜು (ಹೊಂಜು) ಮುಸುಕಿದ ವಾತಾವರಣ ಮುಂದುವರಿದಿದೆ.
ಮಾಲಿನ್ಯದ ನಡುವೆಯೇ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ಕೃಷಿ ಜಮೀನಲ್ಲಿ ಕೂಳೆ ಸುಡುತ್ತಿರುವ ಪ್ರಮಾಣವು ಗಮನಾರ್ಹ ಮಟ್ಟದಲ್ಲಿರುವ ಕಾರಣ, ಜನಜೀವನ ಮತ್ತಷ್ಟು ಬಿಗಡಾಯಿಸಿದೆ.
ದೆಹಲಿಯ ಕನಿಷ್ಠ ತಾಪಮಾನವು ಇಂದು 11.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 373ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳು ದೃಢಪಡಿಸಿವೆ.
ದೆಹಲಿಯಲ್ಲಿರುವ 38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 9ರಲ್ಲಿ ಎಕ್ಯೂಐ ಪ‍್ರಮಾಣವು ಅತ್ಯಂತ ಕಳಪೆಯಾಗಿದೆ. ಆನಂದ್ ವಿಹಾರ್, ಬವಾನಾ, ಜಹಾಂಗೀರ್ಪುರಿ, ಮುಂಡ್ಕಾ, ನೆಹರು ನಗರ, ಶಾದಿಪುರ, ಸೋನಿಯಾ ವಿಹಾರ್, ವಜೀರ್ಪುರ್ ಮತ್ತು ವಿವೇಕ್ ವಿಹಾರ್‌ನಲ್ಲಿ ವಾಯು ಗುಣಮಟ್ಟ ಅತಿ ಕಳಪೆ ಎಂದು ಉಲ್ಲೇಖಿಸಲಾಗಿದೆ.
ವಾಯು ಗುಣಮಟ್ಟವು ದಿನೇ ದಿನೇ ಹದಗೆಡುತ್ತಿರುವ ಕಾರಣ ಸರ್ಕಾರಿ ಕಚೇರಿಗಳಲ್ಲಿನ ಶೇ 50ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶಿಸಲಾಗಿದೆ. ಜತೆಗೆ, ಟ್ರಕ್‌ಗಳ ಪ್ರವೇಶ ನಿಷೇಧ, ವಿವಿಧ ಕಾಮಗಾರಿಗಳ ನಿರ್ಬಂಧ, ಶಾಲೆಗಳ ಮುಚ್ಚುವಿಕೆಯಂತಹ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.