ನವದೆಹಲಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಇದ್ದು, ಶ್ರೀರಾಮ ಹಾಗೂ ಅಯೋಧ್ಯೆಯ ಮಂದಿರ ಇರುವ ಧ್ವಜ ಮತ್ತು ಪೋಸ್ಟರ್‌ಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ.
‘ಬೇಡಿಕೆಗೆ ಅನುಗುಣವಾಗಿ ಪೂರೈಸಲು 40 ಸಾವಿರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ಮುದ್ರಣಾಲಯಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಿದರೂ, ಬೇಡಿಕೆ ಪೂರೈಕೆಯೇ ಕಷ್ಟವಾಗಿದೆ’ ಎಂದು ಸಾದರ್ ಬಜಾರ್ ಟ್ರೇಡರ್ಸ್ ಒಕ್ಕೂಟದ ಅಧ್ಯಕ್ಷ ರಾಕೇಶ್ ಕುಮಾರ್ ಯಾದವ್ ತಿಳಿಸಿದ್ದಾರೆ.
‘ರಾಮಮಂದಿರದ ಉದ್ಘಾಟನೆ ದಿನದಂದು ಮನೆಯಲ್ಲಿ ದೀಪ ಬೆಳಗಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಇದರಿಂದ ಧಾರ್ಮಿಕ ಆಚರಣೆಯ ವಸ್ತುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುವ ಸಾಧ್ಯತೆ ಇದೆ. ಹೀಗಾಗಿ ಆ ನಿಟ್ಟಿನಲ್ಲೂ ಕೆಲಸ ಆರಂಭವಾಗಿದೆ’ ಎಂದು ತಿಳಿಸಿದ್ದಾರೆ.
‘ಅಯೋಧ್ಯೆಯಲ್ಲಿ ಮಾತ್ರವಲ್ಲದೇ, ನಮ್ಮ ಬಜಾರ್‌ನಲ್ಲೂ ಜ. 15ರಿಂದ ಅಲಂಕಾರ ಹಾಗೂ ಸಂಭ್ರಮ ಆರಂಭವಾಗಲಿದೆ. 700 ವ್ಯಾಪಾರಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಸರಿ ಧ್ವಜಕ್ಕೆ ಭಾರೀ ಬೇಡಿಕೆ ಇದ್ದು, ಸಗಟು ಮಾರಾಟವೇ ಹೆಚ್ಚಾಗಿದೆ’ ಎಂದು ತಿಳಿಸಿದ್ದಾರೆ.
ಮಾಳವಿಯ ನಗರದ ಅಂಗಡಿ ಮಾಲೀಕ ಅಜಯ್ ಪ್ರತಿಕ್ರಿಯಿಸಿ, ‘ಧಾರ್ಮಿಕ ಕೇಂದ್ರಗಳು ಹಾಗೂ ವಿವಿಧ ದೇವಾಲಯಗಳ ಆಡಳಿತ ಮಂಡಳಿಗಳು ಭಾರೀ ಸಂಖ್ಯೆಯಲ್ಲಿ ಕೇಸರಿ ಧ್ವಜಗಳನ್ನು ಖರೀದಿಸುತ್ತಿವೆ. ಧ್ವಜ, ಟೋಪಿ ಹಾಗೂ ಪೋಸ್ಟರ್‌ಗಳಿಗೆ ಮಾತ್ರ ಬೇಡಿಕೆ ಇಲ್ಲ. ಬದಲಿಗೆ ಮನೆ ಮತ್ತು ವಾಹನಗಳ ಆಲಂಕಾರಿಕ ವಸ್ತುಗಳಿಗೂ ಬೇಡಿಕೆ ಹೆಚ್ಚಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.