ADVERTISEMENT

ಜಮ್ಮು ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ಅಂತಿಮ: ಯಾವ ಪ್ರದೇಶಕ್ಕೆ ಎಷ್ಟು ಸ್ಥಾನ?

ಐಎಎನ್ಎಸ್
Published 5 ಮೇ 2022, 11:15 IST
Last Updated 5 ಮೇ 2022, 11:15 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣೆ ಆಯೋಗವು ಗುರುವಾರ ತನ್ನ ಅಂತಿಮ ಆದೇಶವನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಜಮ್ಮುವಿಗೆ 43 ವಿಧಾನಸಭಾ ಕ್ಷೇತ್ರಗಳನ್ನು ನೀಡಲಾಗಿದ್ದರೆ, ಕಾಶ್ಮೀರಕ್ಕೆ 47 ಕ್ಷೇತ್ರಗಳನ್ನು ಶಿಫಾರಸು ಮಾಡಲಾಗಿದೆ.

ಇದೇ ಮೊದಲ ಬಾರಿಗೆ, ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ. ಅವುಗಳಲ್ಲಿ ಆರು ಜಮ್ಮುವಿನಲ್ಲಿ ಮತ್ತು ಮೂರು ಕಾಶ್ಮೀರದಲ್ಲಿವೆ. ಈ ಹಿಂದಿನ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ನೀಡಿರಲಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿದ್ದ 90 ವಿಧಾನಸಭಾ ಕ್ಷೇತ್ರಗಳಲ್ಲಿ 43 ಜಮ್ಮು ಪ್ರದೇಶದ ಭಾಗವಾಗಿರಲಿವೆ. 47 ಕ್ಷೇತ್ರಗಳು ಕಾಶ್ಮೀರ ಪ್ರದೇಶಕ್ಕೆ ಸೀಮಿತವಾಗಿರುತ್ತವೆ ಎಂದು ಕ್ಷೇತ್ರ ಮರುವಿಂಗಡಣೆ ಅಂತಿಮ ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ಜಮ್ಮುವಿನ ರಜೌರಿ, ದೋಡಾ, ಉಧಂಪುರ್, ಕಿಶ್ತ್‌ವಾರ, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳನ್ನು ಹೊಸದಾಗಿ ಸೃಷ್ಟಿಸಲಾಗಿದೆ.

ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಹೊಸದಾಗಿ ಒಂದು ಕ್ಷೇತ್ರವನ್ನು ಸೃಷ್ಟಿ ಮಾಡಲಾಗಿದೆ ಎಂದು ಹೇಳಲಾಗಿದೆ. ಈವರೆಗೆ ಕಾಶ್ಮೀರದಲ್ಲಿ 46 ಕ್ಷೇತ್ರಗಳಿದ್ದವು. ಜಮ್ಮುವಿನಲ್ಲಿ 37 ಸ್ಥಾನಗಳಿದ್ದವು.

ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗಾಗಿ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಮೂವರು ಸದಸ್ಯರಿರುವ ಆಯೋಗದ ಅವಧಿಯು ಶುಕ್ರವಾರ (ಮೇ 6) ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.