ADVERTISEMENT

370 ವಿಧಿ ರದ್ಧತಿ ವಿರುದ್ಧದ ಅರ್ಜಿಗಳ ವಿಚಾರಣೆ ಶೀಘ್ರ ನಡೆಯಲಿ: ಯೆಚೂರಿ

ಕಾಶ್ಮೀರಿ ಪಂಡಿತರಷ್ಟೇ ಮುಸ್ಲಿಮರು, ಸಿಖ್ಖರು ಸಮಾನ ಸಂತ್ರಸ್ತರು: ಯೆಚೂರಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 11:56 IST
Last Updated 24 ಮಾರ್ಚ್ 2022, 11:56 IST
   

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಶೀಘ್ರವೇ ಕೈಗೆತ್ತಿಕೊಳ್ಳಬೇಕು’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಒತ್ತಾಯಿಸಿದರು.

ಶ್ರೀನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರ್ಜಿಯು ವಿಚಾರಣೆಗೆ ಬರುವವರೆಗೆ ಸದ್ಯದ ಈಗಿನ ಆಡಳಿತವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಹಾಗೂ ಹೊಸ ಕಾಯ್ದೆಗಳನ್ನು ಜಾರಿಗೆ ತರದಂತೆ ಸೂಚಿಸಬೇಕು’ ಎಂದು ಆಗ್ರಹಿಸಿದರು.

‘ನೆಲದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಉದ್ದೇಶದಿಂದ ಈಗ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿ ಆಗಿನ ರಾಜ್ಯಪಾಲರ (ಜಗಮೋಹನ್‌) ಪಾತ್ರವನ್ನು ಏಕೆ ಹೈಲೈಟ್ ಮಾಡಲಿಲ್ಲ ಎಂದು ಪ್ರಶ್ನಿಸಿದ ಯೆಚೂರಿ, ರಾಜ್ಯಪಾಲರ ಪಾತ್ರವನ್ನು ಸಹ ಹೈಲೈಟ್ ಮಾಡಬೇಕಿತ್ತು. ಸಿನಿಮಾ ತಂಡ ವಾಸ್ತವ ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಕಣಿವೆಯಿಂದ ವಲಸೆ ಹೋಗುವ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರಷ್ಟೇ ಮುಸ್ಲಿಮರು, ಸಿಖ್ಖರು ಹಾಗೂ ಇತರೆ ಸಮುದಾಯದ ಜನರೂ ಇಲ್ಲಿ ಸಮಾನವಾಗಿ ತೊಂದರೆಗೆ ಒಳಗಾಗಿದ್ದಾರೆ' ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ಮೊಹಮ್ಮದ್ ಯೂಸುಫ್ ತಾರಿಗಾಮಿ ಮಾತನಾಡಿ, ‘ದೇಶದಾದ್ಯಂತ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಜನರು ತೊಂದರೆಗೆ ಒಳಗಾಗಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಪರಿಣಾಮ ದೇಶದ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉತ್ತುಂಗಕ್ಕೆ ಏರಿದ್ದು,ಇಂತಹ ಸ್ಥಿತಿಯಲ್ಲಿ ಯುವ ಸಮೂಹ ಉದ್ಯೋಗ ಹುಡುಕುವುದನ್ನು ನಿಲ್ಲಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.