ಕೋಲ್ಕತ್ತ: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಪ್ರಜಾಪ್ರಭುತ್ವವನ್ನು ಕೆಡವಲಾಗಿದೆ ಎಂದಿದ್ದಾರೆ.
'ಭಾರತದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಎಂದು ಅನುಮಾನವಾಗುತ್ತಿದೆ. ಪ್ರಜಾಪ್ರಭುತ್ವದಿಂದ ಆಯ್ಕೆಯಾದ ಸರ್ಕಾರವನ್ನು ಕೆಡವುತ್ತಿದ್ದಾರೆಂದರೆ? ಜನರು ಮತ್ತು ಉದ್ಧವ್ ಠಾಕ್ರೆ ಅವರಿಗೆ ನ್ಯಾಯ ಸಿಗಬೇಕಿದೆ. ಮಹಾರಾಷ್ಟ್ರದ ನಂತರ ಅವರು ಮತ್ತೊಂದು ಸರ್ಕಾರವನ್ನು ಉರುಳಿಸುತ್ತಾರೆ' ಎಂದು ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಪೀಡಿತ ಅಸ್ಸಾಂನಲ್ಲಿ ಶಾಸಕರು ಬೀಡುಬಿಟ್ಟಿರುವುದರನ್ನು ಪ್ರಸ್ತಾಪಿಸಿ, 'ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಅಸ್ಸಾಂ ಸರ್ಕಾರಕ್ಕೆ ಏಕೆ ತೊಂದರೆ ಕೊಡುತ್ತಿರುವಿರಿ? ಅವರನ್ನು (ಶಾಸಕರನ್ನು) ಬಂಗಾಳಕ್ಕೆ ಕಳುಹಿಸಿಕೊಡಿ, ಅವರಿಗೆ ನಾವು ಉತ್ತಮ ಆತಿಥ್ಯ ನೀಡುತ್ತೇವೆ ಹಾಗೂ ಪ್ರಜಾಪ್ರಭುತ್ವದ ಸುರಕ್ಷತೆಯನ್ನೂ ಗಮನಿಸುತ್ತೇವೆ' ಎಂದು ಹೇಳಿದ್ದಾರೆ.
'ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಆಘಾತಕಾರಿಯಾದುದು. ಶಾಸಕರನ್ನು ಹವಾಲಾ ಹಣದ ಮೂಲಕ ಸೆಳೆದುಕೊಳ್ಳಲಾಗಿದೆ. ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯವಿರುವ ಸಂಖ್ಯೆ ಇಲ್ಲ. ಹಾಗಾಗಿಯೇ 'ಹವಾಲಾ ಹಣ' ಬಳಸಿ ಮಹಾರಾಷ್ಟ್ರ ಸರ್ಕಾರವನ್ನು ಅನೈತಿಕ ಹಾಗೂ ಸಂವಿಧಾನಬಾಹಿರ ರೀತಿಯಲ್ಲಿ ಉರುಳಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.
'ನಮ್ಮ ಪಕ್ಷದ 200 ಜನರಿಗೆ ಸಿಬಿಐ ಮತ್ತು ಇ.ಡಿಯಿಂದ ನೋಟಿಸ್ ನೀಡಲಾಗಿದೆ. ಆದರೆ, ಬಿಜೆಪಿಯವರ ಹಣಕ್ಕೆ ಯಾವುದೇ ಮಿತಿಯೂ ಇಲ್ಲ, ಅದು ಹವಾಲಾ ಅಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ಮಹಾ ವಿಕಾಸ ಆಘಾಡಿ ಸರ್ಕಾರದ ಭಾಗವಾಗಿರುವ ಶಿವಸೇನಾದ ಕೆಲವು ಶಾಸಕರು ಮಂಗಳವಾರ ಸೂರತ್‌ಗೆ ತೆರಳಿದ್ದರು. ಅಲ್ಲಿ ಒಂದು ದಿನ ತಂಗಿದ್ದ ಅವರು ಚಾರ್ಟರ್ಡ್ ವಿಮಾನದಲ್ಲಿ ಗುವಾಹಟಿ ಸೇರಿದ್ದಾರೆ. ಬಹುಶಃ ಇದೇ ಮೊದಲ ಬಾರಿಗೆ ಪಶ್ಚಿಮ ಭಾಗದ ರಾಜ್ಯದ ಶಾಸಕರು ರಾಜಕೀಯ ಕಾರಣಗಳಿಂದಾಗಿ ಈಶಾನ್ಯ ಭಾಗದಲ್ಲಿ ಬೀಡುಬಿಟ್ಟಿದ್ದಾರೆ. ವರದಿಗಳ ಪ್ರಕಾರ, ಒಟ್ಟು 46 ಶಾಸಕರು ಗುವಾಹಟಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.