ಕೋಲ್ಕತ್ತ: ಪಶ್ಚಿಮ ಬಂಗಾಳದ ಗಡಿ ಪ್ರದೇಶದಲ್ಲಿ ನುಸುಳುಕೋರರು ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಈ ಮೂಲಕ ಇಲ್ಲಿನ ಯುವಜನತೆಯ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆರೋಪಿಸಿದ್ದಾರೆ.
ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ನುಸುಳುಕೋರರಿಂದಾಗಿ ಗಡಿ ಪ್ರದೇಶದಲ್ಲಿ ಜನಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತಿದೆ. ಟಿಎಂಸಿ ಸರ್ಕಾರವು ನುಸುಳುಕೋರರು ನೆಲೆಯೂರಲು ಅನುವು ಮಾಡಿಕೊಡುತ್ತಿದೆ. ಈ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಮರಿಗೆ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ನೀಡುವ ಮೂಲಕ ’ ಮೂಲ’ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಸಿಎಎ ಜಾರಿಯನ್ನು ಟಿಎಂಸಿ ಯಾಕೆ ವಿರೋಧಿಸುತ್ತಿದೆ? ಟಿಎಂಸಿ ನಾಯಕರು ಸಿಎಎ ಬಗ್ಗೆ ಏಕೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ರಾಜ್ಯದಲ್ಲಿ ಟಿಎಂಸಿ ಸರ್ಕಾರವು ಅಭಿವೃದ್ದಿಯ ವಿರುದ್ಧ ದಿಕ್ಕಿನತ್ತ ಸಾಗುತ್ತಿದ್ದು, ವಿವಿಧ ಯೋಜನೆಗಳ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ.
ಟಿಎಂಸಿ ಸರ್ಕಾರವು ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾದ ಮೀಸಲಾತಿ ಕುರಿತು ಬಹಿರಂಗವಾಗಿಯೇ ಪ್ರಶ್ನಿಸುತ್ತಿದೆ. ಸಂವಿಧಾನ ಮತ್ತು ನ್ಯಾಯಾಲಯದ ಮೇಲೆ ಟಿಎಂಸಿ ನಾಯಕರಿಗೆ ಗೌರವವಿಲ್ಲ ಎಂದು ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಲವು ವರ್ಗಗಳಿಗೆ ನೀಡಲಾಗಿದ್ದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸ್ಥಾನಮಾನವನ್ನು ಕಲ್ಕತ್ತ ಹೈಕೋರ್ಟ್ ರದ್ದುಗೊಳಿಸಿದೆ. ರಾಜ್ಯದಲ್ಲಿನ ಸೇವಾ ಮತ್ತು ಹುದ್ದೆಗಳ ಭರ್ತಿ ಸಂಬಂಧ ರಾಜ್ಯ ಸರ್ಕಾರ 2012ರಲ್ಲಿ ಕಾಯ್ದೆ ರೂಪಿಸಿ ಹಲವು ವರ್ಗಗಳನ್ನು ಒಬಿಸಿ ವ್ಯಾಪ್ತಿಗೆ ತಂದು ಮೀಸಲಾತಿ ಜಾರಿಗೊಳಿಸಿತ್ತು. ಅದನ್ನು ಹೈಕೋರ್ಟ್ ಕಾನೂನುಬಾಹಿರ ಎಂದು ಹೇಳಿದೆ.
‘ಈ ತೀರ್ಪನ್ನು ತಾನು ಒಪ್ಪಿಕೊಳ್ಳುವುದಿಲ್ಲ. ಇದು ಬಿಜೆಪಿ ಪ್ರಭಾವದಿಂದ ನೀಡಲಾದ ತೀರ್ಪು’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು ಎಂದು ಬಿಜೆಪಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.