ಲಖನೌ/ಬಹರಾಯಿಚ್: ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕೆಲವು ಮಳಿಗೆಗಳನ್ನು ತೆರವುಗೊಳಿಸಲು ಆದೇಶಿಸಿರುವುದರಿಂದ ಮಾಲೀಕರು ತಮ್ಮ ಅಂಗಡಿಗಳಲ್ಲಿದ್ದ ಸರಕನ್ನು ತೆಗೆದುಕೊಂಡು ಹೋದರು.
ಈಚೆಗೆ ಬಹರಾಯಿಚ್‌ನ ಮಹಾರಾಜಗಂಜ್‌ನಲ್ಲಿ ದುರ್ಗಾ ಮೂರ್ತಿಯ ಮೆರವಣಿಗೆ ವೇಳೆ ನಡೆದ ಕೋಮು ಹಿಂಸಾಚಾರದಲ್ಲಿ 22 ವರ್ಷದ ರಾಮ್‌ಗೋಪಾಲ್ ಮಿಶ್ರಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶುಕ್ರವಾರದವರೆಗೆ ಪೊಲೀಸರು ಒಟ್ಟು 87 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಘಟನೆ ಬಳಿಕ ಸ್ಥಳೀಯ ಆಡಳಿತವು, ಈ ಪ್ರದೇಶದಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ನಿರ್ಮಿಸಿರುವ ಎಲ್ಲ ಮನೆಗಳು ಹಾಗೂ ಅಂಗಡಿಗಳ ತೆರವಿಗೆ ಮಂದಾಗಿದೆ. ಇದರಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳ ಮನೆ, ಅಂಗಡಿಗಳೂ ಸೇರಿವೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಹ್ಸಿ ಬಿಜೆಪಿ ಶಾಸಕ ಸುರೇಶ್ವರ್ ಸಿಂಗ್ ‘ಜನರು ತಮ್ಮ ಅಂಗಡಿಗಳನ್ನು ಖಾಲಿ ಮಾಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯು ತೆರವುಗೊಳಿಸಲು ಆದೇಶಿಸಿರುವ ಒಟ್ಟು 23 ಅಂಗಡಿಗಳ ಪೈಕಿ 20 ಅಂಗಡಿಗಳು ಮುಸ್ಲಿಂ ಮತ್ತು ಮೂರು ಅಂಗಡಿಗಳು ಹಿಂದೂಗಳಿಗೆ ಸೇರಿವೆ’ ಎಂದರು.
ಲೋಕೋಪಯೋಗಿ ಇಲಾಖೆಯು ಶುಕ್ರವಾರ ಮಹಾರಾಜ್‌ಗಂಜ್ ಪ್ರದೇಶದಲ್ಲಿ ತಪಾಸಣೆ ನಡೆಸಿದೆ. ರಾಮ್‌ಗೋಪಾಲ್ ಮಿಶ್ರಾ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿ ಅಬ್ದುಲ್ ಹಮೀದ್ ಅವರು ಅತಿಕ್ರಮಣ ಮಾಡಿರುವ ಜಾಗದಲ್ಲಿ ಮನೆ ನಿರ್ಮಿಸಿರುವುದು ಕಂಡು ಬಂದಿದ್ದು, ಮೂರು ದಿನಗಳ ಒಳಗಾಗಿ ಖಾಲಿ ಮಾಡುವಂತೆ ಅವರ ಕುಟುಂಬಕ್ಕೆ ನೋಟಿಸ್ ನೀಡಲಾಗಿದೆ.
ಆದರೆ, ಇದು ರಸ್ತೆ ಜಾಗವನ್ನು ಅತಿಕ್ರಮಣ ಮಾಡಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಪ್ರತಿ ವರ್ಷ ನಡೆಸುವ ಸಾಮಾನ್ಯ ತಪಾಸಣೆಯಾಗಿದೆ. ಅಕ್ರಮವಾಗಿ ನಿರ್ಮಿಸಿರುವ ಮನೆಗಳಿಗೆ ರಸ್ತೆ ನಿಯಂತ್ರಣ ಕಾಯ್ದೆ–1964ರ ಅಡಿಯಲ್ಲಿ ನೋಟಿಸ್ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.